ಪಾಳು ಬಿದ್ದ 10 ಎಕ್ರೆ ಭೂಮಿಯಲ್ಲಿ ಕೃಷಿಯ ಮಾಡ ಹೊರಟ ಕೆಥೊಲಿಕ್ ಸಭಾ ಕಲ್ಯಾಣಪುರ ವಲಯ
ಉಡುಪಿ: ಕೃಷಿಕನ ಬದುಕು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು, ಒಂದು ಕಡೆ ಮಳೆ ಕೈ ಕೊಟ್ಟರೆ ಇನ್ನೊಂದೆಡೆ ಕೂಲಿಯಾಳುಗಳ ಕೊರತೆ. ಪ್ರಸ್ತುತ ವರ್ಷ ವಿಶ್ವದಾದ್ಯಂತ ಮಹಾಮಾರಿ ಕೊರೋನಾ ಸಮಸ್ಯೆಯಿಂದ ಬಳಲುತ್ತಿದ್ದು, ಇದರ ನಡುವೆಯೂ ಕೂಡ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯ ಸಮಿತಿ ಇತರ ಸಹಭಾಗಿ ಸಂಘಟನೆಗಳೊಂದಿಗೆ ಸೇರಿಕೊಂಡು ಕ್ರೈಸ್ತರ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ನೀಡಿದ ಪರಿಸರ ಪ್ರೀತಿಯ ಸಂದೇಶವನ್ನು ಪಾಲಿಸುವುದರೊಂದಿಗೆ ಪಾಳು ಬಿದ್ದ ಸುಮಾರು 10 ಎಕ್ರೆ ಭೂಮಿಯಲ್ಲಿ ನಾಟಿ ಮಾಡುವುದರ ಮೂಲಕ ಕೃಷಿಯ ಕೆಲಸಕ್ಕೆ ಕೈ ಹಾಕಿದ್ದಾರೆ.
ಮಂಗಳವಾರ ಅಂಬಾಗಿಲು ಸಮೀಪದ ಕಕ್ಕುಂಜೆಯಲ್ಲಿ ಪಾಳು ಬಿದ್ದಿರುವ ಸುಮಾರು 10 ಎಕ್ರೆ ಪಾಳು ಭೂಮಿಯಲ್ಲಿ ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದ ಸದಸ್ಯರು ಹಾಗೂ ಇತರರು ಸೇರಿಕೊಂಡು ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಅವರು ನೇಜಿ ಹಸ್ತಾಂತರ ಮಾಡಿ ಬಳಿಕ ಗದ್ದೆಯಲ್ಲಿ ಸ್ವತಃ ನೇಜಿ ನಡುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ದೇಶದ ಆರ್ಥಿಕತೆಗೆ ಬಲ ನೀಡುತ್ತಿದ್ದ ಇಂದು ಕೃಷಿ ತನ್ನ ಮಹತ್ವವನ್ನು ಕಳೆದು ಕೊಳ್ಳುತ್ತಿದೆ. ಆದರೆ ಇಂದು ದೇಶ ಕೋವಿಡ್ -19 ಸಮಸ್ಯೆ ಎದುರಿಸತ್ತಿರುವ ವೇಳೆ ಮತ್ತೆ ಪುನಃ ಕೃಷಿ ನಮ್ಮನ್ನು ವಾಪಾಸು ಕರೆಯುತ್ತಿದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದ ಹಲವರು ಉದ್ಯೋಗ ಕಳೆದುಕೊಂಡು ವಾಪಾಸು ಬಂದಾಗ ಮತ್ತೆ ಕೃಷಿಯತ್ತ ಒಲವು ತೋರಲು ಸಾಧ್ಯವಾಗಿದೆ. ಕೃಷಿಯನ್ನು ನಿರ್ಲಕ್ಷ್ಯ ಮಾಡದೇ ಹಡಿಲು ಇರುವ ಜಾಗದಲ್ಲಿ ಮತ್ತೆ ಕೃಷಿಯನ್ನು ಮಾಡುವುದರ ಮೂಲಕ ನಮ್ಮ ಆಹಾರದ ಭದ್ರತೆಯನ್ನು ನಾವೇ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಮಾತನಾಡಿದ ವಲಯ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ, ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದ ನೇತೃತ್ವದಲ್ಲಿ ಹಲವಾರು ಇತರ ಸಂಘಟನೆಗಳ ಸಹಕಾರದೊಂದಿಗೆ ಕಕ್ಕುಂಜೆಯಲ್ಲಿ ಕಳೆದ 25 ವರ್ಷಗಳಿಂದ ಪಾಳು ಬಿದ್ದ ಸುಮಾರು ಹತ್ತು ಎಕ್ರೆ ಗದ್ದೆಗಳಲ್ಲಿ ಭತ್ತದ ಕೃಷಿಯನ್ನು ಮಾಡಲು ನಿರ್ಧರಿಸಲಾಗಿದೆ. 5 ಎಕ್ರೆ ಪ್ರದೇಶವನ್ನು ಕೈನಾಟಿ ಮೂಲಕ ಮತ್ತು 5 ಎಕ್ರೆಯನ್ನು ಯಂತ್ರದ ಮೂಲಕ ನಾಟಿ ಕಾರ್ಯ ಮಾಡಲಾಗುತ್ತಿದೆ ಈ ಮೂಲಕ ಪರಿಸರವನ್ನು ಹಸಿರಾಗಿಸುವುದರೊಂದಿಗೆ ಕೃಷಿಯನ್ನು ಬೆಂಬಲಿಸುವ ಚಿಕ್ಕ ಪ್ರಯತ್ನ ಇದು ಎಂದರು.
ಈ ವೇಳೆ ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದ ಕಾರ್ಯದರ್ಶಿ ರೋಸಿ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷೆ ರೋಜಿ ಬಾರೆಟ್ಟೊ, ಕೋಶಾಧಿಕಾರಿ ಫೆಲಿಕ್ಸ್ ಪಿಂಟೊ, ಸಹ ಕೋಶಾಧಿಕಾರಿ ಉರ್ಬಾನ್ ಲೂವಿಸ್, ಕೇಂದ್ರಿಯ ಸಮಿತಿಯ ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ವಲಯ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.