ಪಿಡಿಒ ವರ್ಗಾವಣೆ ಪ್ರಕರಣ ; ಉದ್ಯಾವರ ಗ್ರಾಮ ಪಂಚಾಯತ್ ಗೆ ಸದಸ್ಯರಿಂದ ಬೀಗ!
ಉಡುಪಿ: ಏಕಾಏಕಿ ಕಾರಣವಿಲ್ಲದೆ ತಾತ್ಕಾಲಿಕ ಪಿಡಿಒಗಳನ್ನು ಬದಲಾಯಿಸಿದ್ದಲ್ಲದೆ ಪಂಚಾಯತ್ ಗೆ ಶಾಶ್ವತ ಪಿಡಿಒ ನೀಡುವಂತೆ ಆಗ್ರಹಿಸಿ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ನಡೆಸಿದ ಪ್ರತಿಭಟನೆಗೆ ಅಧಿಕಾರಿಗಳು ಸ್ಪಂದನೆ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪಂಚಾಯತ್ ಕಚೇರಿಗೆ ಬೀಗ ಜಡಿದರು.
ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ರಮಾನಂದ ಪುರಾಣಿಕ್ ಎಂಬ ಶಾಶ್ವತ ಪಿಡಿ ಒ ಇದ್ದು 4 ತಿಂಗಳ ಹಿಂದೆ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿದ್ದು ಅದರ ಬಳಿಕ ಬದಲಿಯಾಗಿ ತಾತ್ಕಾಲಿಕ ನೆಲೆಯಲ್ಲಿ ಕಡೆಕಾರು ಪಂಚಾಯತ್ ಪಿಡಿಒ ಪ್ರವೀಣ್ ಡಿಸೋಜಾರನ್ನು ಉದ್ಯಾವರ ಗ್ರಾಮ ಪಂಚಾಯತಿಗೆ ನೇಮಕ ಮಾಡಲಾಗಿತ್ತು.
ಪ್ರವೀಣ್ ಡಿಸೋಜಾರು ಉದ್ಯಾವರ ಗ್ರಾಮ ಪಂಚಾಯತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಇತ್ತೀಚೆಗೆ ಪುನಃ ಅವರ ಸ್ಥಾನಕ್ಕೆ ಅಲೆವೂರು ಗ್ರಾಮ ಪಂಚಾಯತಿ ಪಿಡಿಒ ಆಗಿರುವ ಸಿದ್ದೇಶ್ ಅವರನ್ನು ನೇಮಿಸಿದ್ದು ಪದೇ ಪದೇ ಪಿಡಿಒಗಳ ಬದಲಾವಣೆಯಿಂದ ಗ್ರಾಮ ಪಂಚಾಯತ್ ನಲ್ಲಿ ನಡೆಯುವ ದೈನಂದಿನ ಕೆಲಸಗಳು ವ್ಯವಸ್ಥಿತವಾಗಿ ನಿರ್ವಹಣೆಯಾಗಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ಈ ನಿಟ್ಟಿನಲ್ಲಿ ಮೇ 18 ರಂದು ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಸಾಮಾನ್ಯ ಸಭೆಯಲ್ಲಿ ಸಿದ್ದೇಶ್ ಅವರ ಬದಲಿಗೆ ಪ್ರವೀಣ್ ಡಿಸೋಜಾರನ್ನೇ ಮುಂದುವರೆಸಬೇಕಾಗಿ ಆಗ್ರಹಿಸಿದ್ದಾರೆ. ಅದರಂತೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಿಡಿಒ ಬಗ್ಗೆ ಗೊಂದಲವಿರುವುದರಿಂದ ಸುಮಾರು 10.30ಕ್ಕೆ ನಡೆಯಬೇಕಾದ ಸಭೆಯು 11.45ಕ್ಕೆ ನಡೆದು, ಮೊದಲಿಗಾಗಿ ಎಲ್ಲಾ 29 ಮಂದಿ ಸದಸ್ಯರು ಮುಂದಿನ ತಮ್ಮ ಅವಧಿ ಮುಗಿಯುವರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪ್ರವೀಣ್ ಡಿಸೋಜಾರನ್ನೇ ಮುಂದುವರೆಸುವಂತೆ ನಿರ್ಣಯ ಕೈಗೊಂಡಿದ್ದರು.
ಆದರೆ ಶನಿವಾರ ಮತ್ತೆ ಪ್ರವೀಣ್ ಡಿಸೋಜಾರ ಬದಲು ಸಿದ್ದೇಶ್ ಅವರನ್ನು ಪಿಡಿಒ ಆಗಿ ಕಳುಹಿಸಿದ್ದು ಇದರಿಂದ ಆಕ್ರೋಶಗೊಂಡ ಎಲ್ಲಾ ಸದಸ್ಯರು ಈ ಕುರಿತು ಜಿಲ್ಲಾ ಪಂಚಾಯತ್ ಸಿ ಇಒ ಅವರಿಗೆ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಸ್ಪಂದನೆ ದೊರೆಯದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಪಕ್ಷಭೇಧ ಮರೆತು ಪಂಚಾಯತ್ ಸದಸ್ಯರ ಅವಧಿ ಮುಗಿಯುವರೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಪ್ರವೀಣ್ ಡಿಸೋಜಾರನ್ನೇ ಮುಂದುವರೆಸುವಂತೆ ಆಗ್ರಹಿಸಿ ಪಂಚಾಯತ್ ಬೀಗ ತೆರೆಯಲು ಅವಕಾಶ ನೀಡದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಹಾಗೂ ತಾಪಂ ಸದಸ್ಯರಾದ ರಜನಿ ಆರ್ ಅಂಚನ್ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು.
ಮಧ್ಯಾಹ್ನದ ವರೆಗೂ ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರ ಮನವಿಗೆ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಪಂಚಾಯತ್ ಕಚೇರಿಗೆ ಬೀಗ ಜಡಿದರು.