ಪಿಲಿಕುಳ ವೀಕ್ಷಣೆಗೆ ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನ

Spread the love

ಪಿಲಿಕುಳ ವೀಕ್ಷಣೆಗೆ ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನ

ಮಂಗಳೂರು : ಕರ್ನಾಟಕ ಸರಕಾರವು ಮಲೆನಾಡು ಅಭಿವೃದ್ದಿ ಮಂಡಳಿ ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ಪಿಲಿಕುಳದಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸಲು ರೂ. 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಈ ಅನುದಾನದಿಂದ ಪರಿಸರ ಸ್ನೇಹಿ ಇಲೆಕ್ಟ್ರಿಕ್ ವಾಹನಗಳನ್ನು (ಬಗ್ಗಿ) ಖರೀದಿಸಲಾಗಿದೆ.

ಈ ವಾಹನಗಳನ್ನು ಪ್ರವಾಸಿಗರ ಸೌಕರ್ಯಕ್ಕಾಗಿ ಚಾಲನೆಗೊಳಿಸಿ ಲೋಕಾರ್ಪಣೆಗೊಳಿಸುವ ಕಾರ್ಯಕ್ರಮವನ್ನು ಜನವರಿ 5 ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉದ್ಘಾಟನೆಯು ಅಪರಾಹ್ನ 3.30 ಗಂಟೆಗೆ ಪಿಲಿಕುಳ ಬಾಕ್ಸ್ ಆಪೀಸ್ ಮುಂಭಾಗದಲ್ಲಿ ನಡೆಯಲಿದೆ.

ಈ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಪಂಚಾಯತ್‍ನ ಅಧ್ಯಕ್ಷರು, ಸಂಸದರು, ಶಾಸಕರುಗಳು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‍ರವರು, ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಲಿದ್ದಾರೆ.

ಪ್ರವಾಸಿಗರು ತಮ್ಮ ವಾಹನಗಳನ್ನು ಬಾಕ್ಸ್ ಆಫೀಸು ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆ ಮಾಡಿ, ಟಿಕೇಟು ಪಡೆದು ಪಕ್ಕದಲ್ಲೇ ಇರುವ ಬ್ಯಾಟರಿ ಚಾಲಿತ ವಾಹನಗಳ ಮೂಲಕ ಪಿಲಿಕುಳದ ಆಕರ್ಷಣೆಗಳನ್ನು ನಿಗದಿತ ಶುಲ್ಕ ಪಾವತಿಸಿ (ವಯಸ್ಕರಿಗೆ ರೂ.25/-, ಮಕ್ಕಳಿಗೆ ರೂ.10/-) ವೀಕ್ಷಿಸಬಹುದು. ಈ ವಾಹನಗಳನ್ನು ಭೇಟಿಯ ದಿನದಂದು “ಬೇಕಾದಲ್ಲಿ ಹತ್ತಿ ಇಳಿಯುವ” ಅನುಕೂಲತೆಗೆ ಅನುಗುಣವಾಗಿ ಬಳಸಬಹುದು.

ಇದರಿಂದಾಗಿ ಪಿಲಿಕುಳದ ಮುಖ್ಯದ್ವಾರದ ಒಳಗಿನಿಂದ ಬಸ್‍ಗಳು, ಕಾರು, ಲಾರಿ ಆಟೋ, ದ್ವಿಚಕ್ರ ವಾಹನಗಳ ಚಾಲನೆಗೆ ರಕ್ಷಣಾ ದೃಷ್ಠಿಯಿಂದ ನಿಷೇದವನ್ನು ಹೇರಲಾಗಿದೆ. ಪಿಲಿಕುಳದ ಒಳಗಡೆ ಎದುರುಪದವಿಗೆ ಹೋಗುವ ಸಿಟಿ ಬಸ್‍ಗಳು ಪಿಲಿಕುಳದ ಮುಖ್ಯ ದ್ವಾರದವರೆಗೆ ಬಂದು ನಂತರ ತಿರುಗಿ ಪಿಲಿಕುಳದ ಒಳರಸ್ತೆಯ ಬದಲು ಮೂಡುಶೆಡ್ಡೆಯ ರಸ್ತೆಯ ಮೂಲಕ ಎದುರುಪದವಿಗೆ ಸಾಗಬಹುದಾಗಿದೆ. ಆದರೆ ಎದುರುಪದವು ಸುತ್ತಮುತ್ತಲಿನ ನಿವಾಸಿಗಳು ಆಡಳಿತ ಕಚೇರಿಯ ಅನುಮತಿಯನ್ನು ಪಡೆದು ಪಿಲಿಕುಳದ ಒಳಗಿನ ರಸ್ತೆಯನ್ನು ಉಪಯೋಗಿಸಬಹುದು. ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳ ಬಸ್‍ಗಳನ್ನು ಆಡಳಿತ ಕಚೇರಿಯ ಅನುಮತಿ ಮೇರೆಗೆ ನಿಗದಿತ ಶುಲ್ಕ ಪಾವತಿಸಿ ಪ್ರವೇಶಿಸಬಹುದು, ಇದಕ್ಕಾಗಿ ವ್ಯವಸ್ಥೆ ಮಾಡಲಾದ ಸ್ಥಳದಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಯಾವುದೇ ಕಾರಣಕ್ಕೂ ಇತರೆ ವಾಹನಗಳಿಗೆ ಅವಕಾಶವಿರುವುದಿಲ್ಲ. ಪಿಲಿಕುಳದ ಅತ್ಯಮೂಲ್ಯ, ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಆಸ್ತಿ ಪಾಸ್ತಿಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ಅನುಕೂಲತೆಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಅಂತೆಯೇ ಸಾರ್ವಜನಿಕರು ಸಹಕರಿಸಲು ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ನಿಸರ್ಗಧಾಮ ಪಿಲಿಕುಳ ಇವರ ಪ್ರಕಟಣೆ ತಿಳಿಸಿದೆ.


Spread the love