ಪಿಲಿಕುಳದಲ್ಲಿ ಇನ್ನೋವೇಶನ್ ಹಬ್

Spread the love

ಪಿಲಿಕುಳದಲ್ಲಿ ಇನ್ನೋವೇಶನ್ ಹಬ್

ಮಂಗಳೂರು : ದೇಶದಲ್ಲಿ ಸಂಶೋಧನೆ, ಸೃಜನಾತ್ಮಕ ಚಟುವಟಿಕೆ ಮತ್ತು ವೈಜ್ಞಾನಿಕ ಚಿಂತನೆಯ ವಾತಾವರಣ ಮೂಡಿಸಲು ಮತ್ತು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತದ ಕ್ಷೇತ್ರಗಳಲ್ಲಿ ಆಸಕ್ತಿ ಮೂಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಅದರಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ‘ಇನ್ನೋವೇಶನ್ ಹಬ್’ ಪ್ರಾರಂಭಿಸಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಪ್ರಯೋಗಗಳನ್ನು ಮಾಡಲು ಮತ್ತು ಸಂಶೋಧನೆಗೆ ಪ್ರೇರೇಪಿಸಲು ಅನುವು ಮಾಡಿಕೊಡಲಾಗುವುದು.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕೇಂದ್ರಕ್ಕೆ ಬಂದು ತಮಗೆ ಆಸಕ್ತಿಯ ವಿಷಯಗಳಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಬಹುದು. ನಂತರ ತಮ್ಮ ಆದ್ಯತೆಯ ಕ್ಷೇತ್ರದಲ್ಲಿ ಯೋಜನೆಯನ್ನು ರೂಪಿಸುವ ಮತ್ತು ಅದಕ್ಕೆ ಬೇಕಾದ ಮಾರ್ಗದರ್ಶನ ಪಡೆಯುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗುವುದು. ವಿಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಲಾಗುವುದು. ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಪ್ರಯೋಗಗಳ ಮೂಲಕ ವಿಜ್ಞಾನವನ್ನು ಕಲಿಯುವ ಮನೋಭಾವವನ್ನು ಬೆಳೆಸುವುದು ಇನ್ನೋವೇಶನ್ ಹಬ್‍ನ ಉದ್ದೇಶ. ಇದಕ್ಕೆ ಸೇರಬಯಸುವ ವಿದ್ಯಾರ್ಥಿಗಳು ಮಾಡಿ ನೋಡುವ ಕುತೂಹಲ ಹಾಗೂ ಆಸಕ್ತಿ ಇರುವವರಾಗಬೇಕು. ಇಲ್ಲ್ಲಿ ಸದಸ್ಯರಾಗುವವರಿಗೆ ಬೌದ್ಧಿಕ ಸಾಮರ್ಥ್ಯ, ವಿಷಯವನ್ನು ತಿಳಿದುಕೊಳ್ಳುವ ಕುತೂಹಲ, ತಾರ್ಕಿಕ ಚಿಂತನೆ ಇತ್ಯಾದಿಗಳಿಗೆ ಪೂರಕ ವಾತಾವರಣ ಸಿಗುವುದು.

ಭವಿಷ್ಯದಲ್ಲಿ ನೀಟ್, ಜೆಇಇ, ಯುಪಿಎಸ್‍ಸಿನಂತಹ ಸ್ಪಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮ ವಿಶ್ವಾಸ ಮೂಡುವುದು. ಆಸಕ್ತ ವಿದ್ಯಾರ್ಥಿಗಳು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಬಂದು ಸಂಬಂಧಪಟ್ಟವರನ್ನು ಸಂಪರ್ಕಿಸಿ ವಿವರಗಳನ್ನು ತಿಳಿದುಕೊಳ್ಳಬಹುದು. ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿಜ್ಞಾನ ಅಧ್ಯಾಪಕರು ವಿದ್ಯಾರ್ಥಿಗಳನ್ನು ಇನ್ನೋವೇಶನ್ ಹಬ್ ಸೇರಲು ಉತ್ತೇಜಿಸಬೇಕೆಂದು ವಿನಂತಿ.
ಇಂತಹ ಯೋಜನೆಗಳಲ್ಲಿ ಆಸಕ್ತಿಯಿರುವ ಸಾರ್ವಜನಿಕ ಸಂಸ್ಥೆಗಳು, ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಪದವಿ ಕಾಲೇಜುಗಳು, ಸಂಪನ್ಮೂಲ ವ್ಯಕ್ತಿಗಳು ಮತ್ತು ಉಪಯುಕ್ತ ಉಪಕರಣಗಳ ಸಂಶೋಧಕರು ದಯವಿಟ್ಟು ಕೇಂದ್ರವನ್ನು ಸಂಪರ್ಕಿಸಬೇಕಾಗಿ ಅಪೇಕ್ಷಿಸುತ್ತೇವೆ. ಅವರ ಸಹಕಾರ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸುವಲ್ಲಿ ಅಗತ್ಯವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


Spread the love