ಪುತ್ತಿಗೆ ಪರ್ಯಾಯ ಮಹೋತ್ಸವ: ಶೋಭಾ ಯಾತ್ರೆಯಲ್ಲಿ ಮೇಳೈಸಿದ ಸಾಂಸ್ಕೃತಿಕ ವೈಭವ
ಉಡುಪಿ: ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವದ ಭವ್ಯ ಶೋಭಾ ಯಾತ್ರೆ ಗುರುವಾರ ಬೆಳಗಿನ ಜಾವ ಅದ್ದೂರಿಯಾಗಿ ಜರುಗುವುದರೊಂದಿಗೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು.
ಕಾಪು ದಂಡಯಾತ್ರೆ ಮಧ್ಯರಾತ್ರಿ ಸ್ನಾನ ಮುಗಿಸಿದ ಯತಿಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಜೋಡುಕಟ್ಟೆ ಆಗಮಿಸಿದರು. ಬಳಿಕ ವೈಭವದ ಮೆರವಣಿಗೆ ಆರಂಭವಾಯಿತು. ಅಲ್ಲಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಹಳೆಯ ಡಯನಾ ಸರ್ಕಲ್, ಐಡಿಯಲ್ ಸರ್ಕಲ್, ತೆಂಕಪೇಟೆ ಮಾರ್ಗವಾಗಿ ರಥಬೀದಿಗೆ ಸಾಗಿ ಬಂತು.
ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು ಕಣ್ಮನ ಸೆಳೆದವು. ಸ್ತಬ್ಧಚಿತ್ರಗಳು, ಚೆಂಡೆಯ ನಾದ ಮೆರವಣಿಗೆಯ ಅಂದ ಹೆಚ್ಚಿಸಿದವು. ಜಗ್ಗಲಿಕೆ ವಾದ್ಯ, ಶ್ರೀಸಾಯಿ ಚೆಂಡೆ ಬಳಗ, ಪೂಜೆ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆಯಾಟ, ಕೊಂಬೆ ಬಳಗ, ಹರೇ ರಾಮ ಹರೇ ಕೃಷ್ಣ, ಸಹಿತ ವಿವಿಧ ತಂಡಗಳು ಭಾಗಿಯಾಗಿದ್ದವರು ಅಯೋಧ್ಯೆಯ ರಾಮಮಂದಿರದ ಟ್ಯಾಬ್ಲೋ ಆಕರ್ಷಣಿಯವಾಗಿತ್ತು
ನೂರಾರು ಟ್ಯಾಬ್ಲೋ, ಕಲಾತಂಡಗಳ ಬಳಿಕ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು.
ಗುರುವಾರ ಮುಂಜಾನೆ ಸುಮಾರು 2.30ಕ್ಕೆ ಜೋಡುಕಟ್ಟೆಯಿಂದ ಆರಂಭಗೊಂಡ ಮೆರವಣಿಗೆ ಸುಮಾರು ಎರಡು ಕಿ.ಮೀ ಸಾಗಿ ರಥಬೀದಿಯಲ್ಲಿ ಸಂಪನ್ನಗೊಂಡಿತು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಭಾಳ್ಕರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಶಾಸಕರಾದ ಯಶಪಾಲ್ ಸುವರ್ಣ ಸಹಿತ ಹಲವು ಗಣ್ಯರು ಶೋಭಾಯಾತ್ರೆಯಲ್ಲಿ ಭಾಗಿಯಾದರು.
ಮೆರವಣಿಗೆಯ ಕೊನೆಯಲ್ಲಿ ನಗರಸಭೆಯಿಂದ ನೇಮಕ ಮಾಡಿದ್ದ ಪೌರ ಕಾರ್ಮಿಕರು ಇಡೀ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು. ಸುರಕ್ಷತೆಯ ದೃಷ್ಟಿಯಿಂದ ಬಿಗು ಪೊಲೀಸ್ ಭದ್ರತೆ ನೀಡಲಾಯಿತು.
ಪರ್ಯಾಯ ಶೋಭಾ ಯಾತ್ರೆಯಿಂದ ದೂರ ಉಳಿದ ಏಳು ಮಠದ ಸ್ವಾಮೀಜಿಗಳು: ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೀಮೊಲ್ಲಂಘನ ಮಾಡಿದ್ದಾರೆ ಎಂಬ ಉದ್ದೇಶದಿಂದ ಹಿಂದಿನಿಂದಲೂ ಅವರ ಪರ್ಯಾಯದಲ್ಲಿ ಇತರ ಸ್ವಾಮೀಜಿಗಳು ಶೋಭಾಯಾತ್ರೆಯಿಂದ ದೂರ ಉಳಿದಿದ್ದರು. ಅದೇ ಸಂಪ್ರದಾಯ ಈ ಬಾರಿ ಕೂಡ ಮುಂದುವರೆದಿದ್ದು ಇತರ ಏಳು ಮಠದ ಸ್ವಾಮೀಜಿಗಳು ಶೋಭಾ ಯಾತ್ರೆಯಲ್ಲಿ ಭಾಗಿಯಾಗಿರಲಿಲ್ಲ