ಪುತ್ತೂರು: ಅಂಗಡಿಯಲ್ಲಿ ಕಳ್ಳತನ – 48 ಗಂಟೆಯಲ್ಲಿ ಆರೋಪಿಯ ಬಂಧನ
ಮಂಗಳೂರು: ಅಂಗಡಿಯೊಂದರಿಂದ ಹಣ ಕಳ್ಳತನ ಮಾಡಿದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಳ್ತಂಗಡಿ ಇಳಂತಿಲ ನಿವಾಸಿ ಮಹಮ್ಮದ್ ಶಾಫಿ (28) ಎಂದು ಗುರುತಿಸಲಾಗಿದೆ.
ಸಪ್ಟೆಂಬರ್ 14ರಂದು ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ಮಾತೃಶ್ರೀ ಕಾಂಪ್ಲೆಕ್ಸ್ ನ ಅಂಗಡಿಯೊಂದರಿಂದ ರೂ,1,00,000/- ನಗದು ಹಣ ಕಳವಾದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣೆ, ವೃತ್ತ ಕಚೇರಿ , ಡಿ.ಸಿ.ಐ.ಬಿ. ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ತನಿಖಾ ತಂಡವು ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಕಳವಾಗಿದ್ದ ರೂ,1,00,000/- ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 60,000/- ರೂಪಾಯಿ ಮೌಲ್ಯದ KA21 U 6006 ನೇ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
ಆರೋಪಿ ಮಹಮ್ಮದ್ ಶಾಫಿಯ ವಿರುದ್ಧ ಬೆಳ್ತಂಗಡಿ, ಪುತ್ತೂರು ನಗರ, ವಿಟ್ಲ, ಕಾರ್ಕಳ ಗ್ರಾಮಾಂತರ, ಉಡುಪಿ ನಗರ, ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತವೆ.