ಪುತ್ತೂರು: ಹೆರಿಗೆ ವೇಳೆ ಹೊಟ್ಟೆಯೊಳಗೇ ಉಳಿದ ಬಟ್ಟೆ: ಕ್ರಮಕ್ಕೆ ಆಗ್ರಹ

Spread the love

ಪುತ್ತೂರು: ಹೆರಿಗೆ ವೇಳೆ ಹೊಟ್ಟೆಯೊಳಗೇ ಉಳಿದ ಬಟ್ಟೆ: ಕ್ರಮಕ್ಕೆ ಆಗ್ರಹ

ಪುತ್ತೂರು: ತನ್ನ ಪತ್ನಿಯ ಹೆರಿಗೆಯ ಸಂದರ್ಭ ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲೇ ಬಟ್ಟೆ ಉಳಿದು, ಸೋಂಕಿಗೆ ಕಾರಣವಾದ ಬ್ಯಾಕ್ಟಿರಿಯ ದೇಹದ ವಿವಿಧ ಭಾಗಕ್ಕೆ ಹೋದ ಕಾರಣ ಪತ್ನಿಯ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಮೂರು ತಿಂಗಳಿನಿಂದ ದೈಹಿಕ ಮತ್ತು ಮಾನಸಿಕ ಯಾತನೆಯಲ್ಲಿ ದಿನಕಳೆಯುವ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಮಹಿಳೆಯ ಪತಿ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ಗಗನ್ ದೀಪ್ ಬಿ. ಆಗ್ರಹಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ನ.27ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ತನ್ನ ಪತ್ನಿಗೆ ಶಸ್ತ್ರಕ್ರಿಯೆ ಮೂಲಕ ಹೆರಿಗೆಯಾಗಿದ್ದು,ಡಿ.2 ಆಸ್ಪತ್ರೆಯಿಂದ ಬಿಡುಗಡೆಯಾಗಿದೆ. ಇದಾಗ ಬಳಿಕ ಮನೆಯಲ್ಲಿ ವಿಪರೀತ ಜ್ವರ ಬಂದಿದ್ದು, ಹೆರಿಗೆ ಮಾಡಿಸಿದ ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಿದಾಗ ಜ್ವರದ ಔಷಧಿಯನ್ನು ಬಳಸುವಂತೆ ಸೂಚಿಸಿದರು. ಎರಡು ದಿನ ಕಳೆದರೂ ಜ್ವರ ಕಮ್ಮಿಯಾಗದ ಕಾರಣ ಮತ್ತೆ ಇದೇ ವೈದ್ಯರಲ್ಲಿ ವಿಚಾರಿಸಿದಾಗ ಅವರು ಹೆಮಟೋಮ್ ಆಗಿರಬಹುದು ಎಂದು ಹೇಳಿದ್ದಲ್ಲದೆ, ಅಲ್ಪಾ ಸೌಂಡ್ ಮಾಡಬಹುದೆಂದು ಹೇಳಿದ್ದಾರೆ. ಇದರಲ್ಲಿ 10 ಮಾಪ್ ಪಾರ್ಮೇಶನ್ ಇರುವುದು ಕಂಡು ಬಂದಿದೆ. ಬೇರೆ ಔಷಧಿಯನ್ನು ನೀಡಿದ್ದರು. ಬಳಿಕ ಜ್ವರ ಕಡಿಮೆಯಾಗಿತ್ತು.

ಬಳಿಕದ ಕೆಲ ದಿನಗಳಲ್ಲಿ ಸಂಧಿ ನೋವು ಪ್ರಾರಂಭವಾಗಿದ್ದು, ಈ ಬಗ್ಗೆಯೂ ವೈದ್ಯರಲ್ಲಿ ವಿಚಾರಿಸಿದಾಗ ಆರ್ಥೋ ಇರಬಹುದು ಎಂದು ತಿಳಿಸಿದ್ದರು. ಕೆಲವು ದಿನ ಬಳಿಕ ಮಗುವನ್ನು ಹಾಸಿಗೆಯಿಂದ ಎತ್ತಲಾಗದ, ನಿಲ್ಲಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ತಿಳಿಸಿದಾಗ ರುಮೊಟೋಲೋಜಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂಬ ಸಲಹೆ ನೀಡಿದರು. ಮಂಗಳೂರಿನ ತಜ್ಞರು ವರದಿಗಳನ್ನು ಪರಿಶೀಲನೆ ನಡೆಸಿ, ಸಿಟಿ ಸ್ಕ್ಯಾನ್ ಮಾಡಿದಾಗ ಸರ್ಜಿಕಲ್ ಮಾಪ್ ಅನ್ನು ಸೂಚಿಸುವ ಗ್ಲಾಸಿಪಿಗೋಮಾ ಇದೆಯೆಂಬುದು ಬೆಳಕಿಗೆ ಬಂದಿದ್ದು, ಇಷ್ಟೊತ್ತಿಗಾಗಲೇ ಶಸ್ತ್ರಚಿಕಿತ್ಸೆ ನಡೆದು ಒಂದೂವರೆ ತಿಂಗಳು ಕಳೆದಿರುವ ಕಾರಣ ಈಗಾಗಲೇ ಅಪಾಯದ ಸ್ಥಿತಿ ತಲುಪಿದೆ ಎಂದು ತಿಳಿಸಿದ್ದರು. ದ್ವಿತೀಯ ಅಭಿಪ್ರಾಯ ಪಡೆದು ತಕ್ಷಣ ಅದನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಶಸ್ತ್ರತಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದರು.

ಜ.25ರಂದು ಪುತ್ತೂರಿನ ಇನ್ನೊಂದು ಆಸ್ಪತ್ರೆಯಲ್ಲಿ ಸುಮಾರು 4 ತಾಸಿನ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿ ಬಾಕಿಯಾಗಿದ್ದ ಬಟ್ಟೆ ತೆರವು ಮಾಡಲಾಗಿದೆ. ಸಿ.ಟಿ. ಸ್ಕ್ಯಾನ್ ಮಾಡಿಸಿದಾಗ ಸೋಂಕು ತಗುಲಿದಲ್ಲಿ ಕೀವು ತುಂಬಿರುವುದು ತಿಳಿದು ಬಂದಿದ್ದು, ತಕ್ಷಣ ಅದನ್ನು ಆಧುನಿಕ ತಂತಜ್ಞಾನ ಬಳಸಿ ತೆಗೆಯಲಾಯಿತು. ಬೇಕಾದ ಎಲ್ಲಾ ಚಿಕಿತ್ಸೆಗಳೂ ತ್ವರಿತವಾಗಿ ನಡೆದಿದೆ. ವೈದ್ಯರು ಸಾಕಷ್ಟು ಉತ್ತಮ ಪ್ರಯತ್ನಗಳನ್ನು ಮಾಡಿ ಜೀವ ಉಳಿಸಿದ್ದಾರೆ. ಸುಮಾರು 22 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಪಿ.ಜಿ. ಪೋರ್ಟಲ್‌ನಲ್ಲಿ ಮೊದಲು ದೂರು ದಾಖಲಿಸಲಾಗಿದೆ. ಫೆ.22ರಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವೈದ್ಯರ ನಿರ್ಲಕ್ಷ್ಯತೆಯ ಬಗ್ಗೆ ದೂರು ನೀಡಲಾಗಿದೆ. ಫೆ.23ರಂದು ಆಸ್ಪತ್ರೆಯ ವೈದ್ಯರ ಮೇಲೆ ಪುತ್ತೂರು ನಗರ ಇನ್‌ಸ್ಪಕ್ಟರ್‌ಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಡಿಯನ್ ಮೆಡಿಕಲ್ ಬೋರ್ಡ್ ಹಾಗೂ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲೂ ದೂರು ದಾಖಲಿಸಲಾಗಿದೆ. ಎಲ್ಲ ಕಡೆಗಳಲ್ಲಿಯೂ ಇಮೇಲ್ ಹಾಗೂ ಪೋರ್ಟಲ್ ಮೂಲಕ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments