ಪುದು ಗ್ರಾಪಂ ಸದಸ್ಯ ಹಾಗೂ ಮೀನಿನ ವ್ಯಾಪಾರಿ ರಿಯಾಝ್ ಕೊಲೆಯತ್ನ ಪ್ರಕರಣ: ಮತ್ತೆ ನಾಲ್ವರ ಬಂಧನ
ಉಡುಪಿ: ಬಂಟ್ವಾಳ ತಾಲೂಕಿನ ಪುದು ಗ್ರಾಪಂ ಸದಸ್ಯ ಹಾಗೂ ಮೀನಿನ ವ್ಯಾಪಾರಿ ಕೆ.ಮುಹಮ್ಮದ್ ರಿಯಾಝ್(34) ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಸಹಿತ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ವಳಚ್ಚಿಲ್‌ನ ಮಹಮ್ಮದ್ ಆಶೀಕ್ ಕೋಚಿ(22), ಮಂಗಳೂರು ಮಾರ್ನಮಿಕಟ್ಟೆಯ ತೌಸೀರ್ ಪತ್ತೊಂಜಿ(25), ಅಡ್ಯಾರುಕಟ್ಟೆಯ ಮಹಮ್ಮದ್ ತೌಸಿಫ್ ಯಾನೆ ತಚ್ಚು(25), ವಳಚ್ಚಿಲ್ ನ ಮುಹಮ್ಮದ್ ಮುಸ್ತಾಕ್ ಯಾನೆ ಮಿಸ್ತಾ ಯಾನೆ ಬಾಬಿ(23) ಬಂಧಿತ ಆರೋಪಿಗಳು.
ಪ್ರಕರಣದ ಪ್ರಮುಖ ಆರೋಪಿ ಪರಂಗಿಪೇಟೆ ಪುದು ಗ್ರಾಮದ ಮುಹಮ್ಮದ್ ಇಸ್ಮಾಯಿಲ್(47), ಆತನ ಸಹೋದರ ಮುಹಮ್ಮದ್ ಗೌಸ್ (33), ಮಂಗಳೂರು ವಳಚ್ಚಿಲ್‌ನ ಅಬ್ದುಲ್ ಕೈಸ್(61), ಮೊಂಟುಗೋಳಿಯ ಮಹಮ್ಮದ್ ಮುನೀಜ್(21), ಬಂಟ್ವಾಳ ಮುಡಿಪುವಿನ ಅನ್ಸಾರ್ (22) ಎಂಬವರನ್ನು ಜೂ.10ರಂದು ಬಂಧಿಸಲಾಗಿತ್ತು.
ಮುಹಮ್ಮದ್ ಇಸ್ಮಾಯಿಲ್ ಈ ಕೃತ್ಯ ಎಸಗಲು ಇತರ ಆರೋಪಿಗಳಿಗೆ ಸುಪಾರಿ ನೀಡಿರುವುದು ತನಿಖೆಯಿಂದ ತಿಳಿದುಬಂದಿದೆ. ಇವರಲ್ಲಿ ಆರೋಪಿ ಆಶೀಕ್ ಕೋಚಿ ಇನ್ನೋರ್ವ ಆರೋಪಿ ಅಬ್ದುಲ್ ಕೈಸ್ ಎಂಬಾತನ ಮಗ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಲಾರಿ, ಒಂದು ಕಾರು ಹಾಗೂ 3 ತಲವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಮುಹಮ್ಮದ್ ತೌಸೀರ್ ವಿರುದ್ಧ ಬಂಟ್ವಾಳ ಗ್ರಾಮಾಂತರ, ಕಂಕನಾಡಿ ಪೊಲೀಸ್ ಠಾಣೆ, ಕದ್ರಿ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಹಲ್ಲೆ ಮುಂತಾದ 5 ಪ್ರಕರಣಗಳು, ಮಹಮ್ಮದ್ ತೌಸಿಫ್ ವಿರುದ್ಧ ಮೇಲೆ ಕದ್ರಿ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಪೂಂಜಾಲಕಟ್ಟೆ ಪೊಲೀಸ್ ಠಾಣೆ ಮತ್ತು ಮಂಗಳೂರು ಉರ್ವಾ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ, ಕೊಲೆಯತ್ನ ಪ್ರಕರಣ ಹಾಗೂ ಮಹಮ್ಮದ್ ಮುಸ್ತಾಕ್ ವಿರುದ್ಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಜೂ.7ರಂದು ಬೆಳಗಿನ ಜಾವ 4:30ರ ಸುಮಾರಿಗೆ ಮೀನು ವ್ಯಾಪಾರಕ್ಕಾಗಿ ಮಲ್ಪೆ ಬಂದರಿಗೆ ಆಗಮಿಸಿದ್ದ ಮಹಮ್ಮದ್ ರಿಯಾಝ್ ರವರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ, ಕತ್ತು, ಕೈ ಮತ್ತು ಕಾಲುಗಳಿಗೆ ತೀವ್ರ ತರಹದ ಗಾಯ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಂತೆ ಉಡುಪಿ ನಗರ ವೃತ್ತದ ಹಾಗೂ ಉಡುಪಿ ಡಿಸಿಐಬಿ ಅಧಿಕಾರಿ ಮತ್ತು ಸಿಬ್ಬಂದಿಯವರ 2 ಪ್ರತ್ಯೇಕ ತಂಡಗಳನ್ನು ರಚಿಸಿದ್ದು ಈ ಎರಡು ತಂಡಗಳು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಜೈಶಂಕರ್ ಟಿ.ಆರ್ ಮಾರ್ಗ ದರ್ಶನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.