ಪುನಃ ಜೀತ ಪದ್ದತಿ ವ್ಯವಸ್ಥೆ ಜಾರಿಗೆ ತರುವ ಹುನ್ನಾರ: ಬಿಜೆಪಿ ವಿರುದ್ದ ವಿಕಾಸ್ ಹೆಗ್ಡೆ ವಾಗ್ದಾಳಿ
ಕುಂದಾಪುರ: ಇಂದಿರಾ ಗಾಂಧಿಯವರ ಉಳುವವನೆ ಹೊಲದೊಡೆಯ ಕಾರ್ಯಕ್ರಮವನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಚಾಚುತಪ್ಪದೆ ಜಾರಿಗೆ ತಂದು ಜೀತಪದ್ದತಿ ವ್ಯವಸ್ಥೆಯನ್ನು ಕಿತ್ತೊಗೆದಿದ್ದರು. ಕೂಲಿಕಾರ್ಮಿಕರಾಗಿ ಜಮೀನ್ದಾರರ ಹೊಲದಲ್ಲಿ ದುಡಿಯುತ್ತಿರುವವರಿಗೆ ಆಸ್ತಿಯ ಹಕ್ಕನ್ನು ಕೊಟ್ಟು ಅವರನ್ನು ಭೂಮಾಲೀಕರನ್ನಾಗಿ ಮಾಡಿದ್ದರು. ಆದರೆ ಇವತ್ತು ಅದೇ ಭೂಮಿಯನ್ನು ರೈತರಿಂದ ಕಸಿದು ಶ್ರೀಮಂತರಿಗೆ ನೀಡಿ ಪುನಃ ಜೀತಪದ್ದತಿ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರುವ ಹುನ್ನಾರ ನಡೆಸುತ್ತಿದೆ ಎಂದು ಜಿಲ್ಲಾ ರೈತ ಸಂಘದ ಮುಖಂಡ ವಿಕಾಸ್ ಹೆಗ್ಡೆ ವಾಗ್ದಾಳಿ ನಡೆಸಿದರು.
ಅವರು ಸೋಮವಾರ ನಗರದ ಹೃದಯಭಾಗವಾದ ಶಾಸ್ತ್ರೀವೃತ್ತದಲ್ಲಿ ಕಾಂಗ್ರೆಸ್, ಸಿಪಿಐ(ಎಂ), ದಲಿತ ಸಂಘರ್ಷ ಸಮಿತಿ, ಜೆಡಿಎಸ್, ಡಿವೈಎಫ್ಐ ಕುಂದಾಪುರ ಇದರ ವತಿಯಿಂದ ನಡೆದ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಬಂಡವಾಳಶಾಹಿಗಳಿಗೆ ನಮ್ಮ ಸಂಪತ್ತನ್ನು ಮಾರಾಟ ಮಾಡುವ ಉದ್ದೇಶದಿಂದ 79 ಎಬಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ ಬಿಟ್ಟರೆ ಇದು ರೈತ ಪರ ಕಾಯ್ದೆಯಲ್ಲ. ಈ ಕಾಯ್ದೆಯನ್ನು ಜಾರಿಗೆ ತಂದಿರುವ ಸರ್ಕಾರದ ಹಿಡನ್ ಅಜೆಂಡಾ ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ಕಾರ್ಪೋರೇಟ್ ಕಂಪೆನಿಗಳು ಕೃಷಿಭೂಮಿಯನ್ನ ಖರೀದಿ ಮಾಡಿ ಅವರ ಸಂಸ್ಥೆಯನ್ನು ಬೆಳೆಸುವ ಉದ್ದೇಶ. ಇನ್ನೊಂದು ಅಧಿಕಾರಿಗಳು, ರಾಜಕಾರಣಿಗಳು ಕೃಷಿಭೂಮಿಯನ್ನು ಖರೀದಿ ಮಾಡುವುದರ ಮೂಲಕ ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತನೆ ಮಾಡಿಕೊಳ್ಳುವ ಸಲುವಾಗಿಯೇ 79 ಎಬಿ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಅವರು ಆರೋಪಿಸಿದ್ದಾರೆ.
ಜನವಿರೋಧಿ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ದ ಧ್ವನಿ ಎತ್ತಿ ಹೋರಾಟ ಮಾಡದಿದ್ದರೆ ಈ ದೇಶವನ್ನೇ ಮಾರಾಟ ಮಾಡಬಹುದು. ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರಗಳಿಲ್ಲ. ಇಲ್ಲಿ ಇರುವುದು ಏಜೆನ್ಸಿ. ನಮ್ಮ ದೇಶದ ಸಂಸ್ಥೆಗಳನ್ನು, ದೊಡ್ಡ ದೊಡ್ಡ ಸರ್ಕಾರಿ ಉದ್ದಿಮೆಗಳನ್ನು ಮಾರಾಟ ಮಾಡಿ ಅದರಿಂದ ಲಾಭ ಗಳಿಸುವುದು ಇವರ ಉದ್ದೇಶ. ಒಂದು ಸರ್ಕಾರವಾಗಿ ಇವರು ಕೆಲಸ ಮಾಡುತ್ತಿಲ್ಲ. ಮುಂದೆಯೂ ಮಾಡುವುದಿಲ್ಲ. ಅಂಬಾನಿ, ಅದಾನಿಯಂತಹ ಕಾರ್ಪೋರೇಟ್ ದಣಿಗಳಿಗೆ ಸರ್ಕಾರಗಳು ಮಂಡಿಯೂರಿಯಾಗಿದೆ. ಹಿಂದೆ ಜಾರಿಗೆ ತಂದಿರುವ ರೈತಪರವಾದ ಕಾಯ್ದೆಯನ್ನು ಮಣ್ಣುಪಾಲು ಮಾಡಿ ಇವತ್ತು ಹಕ್ಕುಪತ್ರ ಸಿಕ್ಕಿದರೆ ನಾಳೆ ಅದನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಿಂದಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ತುತ್ತು ಊಟಕ್ಕಾಗಿ ಪರಿತಪಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಸಿಪಿಐ(ಎಂ) ಮುಖಂಡ ಕೆ, ಶಂಕರ್ ಮಾತನಾಡಿ, ಈ ದೇಶದ ಕಾರ್ಮಿಕರ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದ ಕೇಂದ್ರ ರಾಜ್ಯ ಸರ್ಕಾರಗಳು ಇದೀಗ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಈ ದೇಶದ ರೈತರನ್ನು ಮುಗಿಸಲು ಹೊರಟಿದೆ. ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಈಗಾಗಲೇ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದೆ. ರೈತ ವಿರೋಧಿ ಕಾಯ್ದೆಗಳ ವಿರುದ್ದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಇದು ಹೀಗೆಯೇ ಮುಂದುವರಿದರೆ ರಾಜ್ಯ ಕೇಂದ್ರ ಸರ್ಕಾರಗಳಿಗೆ ಇನ್ನು ಹೆಚ್ಚು ದಿನಗಳಿಲ್ಲ. ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಬಿಜೆಪಿ ಸರ್ಕಾರ ರೈತವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಯ್ದೆ ತಿದ್ದುಪಡಿಯಿಂದಾಗಿ ಇಡೀ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಜನರ, ರೈತರ ಕಾರ್ಮಿಕರ ಹಕ್ಕು ಭಾದ್ಯತೆಗಳನ್ನು ಕಸಿಯಲು, ರಾಜಕೀಯ ಸ್ವಾತಂತ್ರ್ಯವನ್ನು ಕಸಿಯಲು, ಪ್ರತಿಭಟನೆಯಂತಹ ಪ್ರಮುಖ ಸಂವಿಧಾನ ಬದ್ದವಾದ ಹಕ್ಕನ್ನು ಕಸಿಯಲು ಬಿಜೆಪಿ ಸರ್ಕಾರ ಹೊರಟಿದೆ. ಜನರ ಸಮಸ್ಯೆಗಳನ್ನು ಹಾಗೆಯೇ ಬಿಟ್ಟು, ಅವರ ಸಮಸ್ಯೆಗಳನ್ನು ಪರಿಹರಿಸುವ ಬದಲು ಜನರ ಮೇಲೆಯೇ ದಾಳಿ ಮಾಡುತ್ತಿರುವ ಸರ್ಕಾರ ಭದ್ರವಾಗಿ ಉಳಿಯೋದಿಲ್ಲ. ಸರ್ಕಾರದ ವಿರುದ್ದ ಚಳವಳಿ ಇನ್ನೂ ವಿಸ್ತøತವಾಗಿ ನಡೆದರೆ ಈ ಸರ್ಕಾರವನ್ನು ಮನೆಗೆ ಕಳುಹಿಸಲು ಇನ್ನೊಂದು ಚುನಾವಣೆಯವರೆಗೆ ಕಾಯುವ ಅವಶ್ಯಕತೆ ಇಲ್ಲ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಇಬ್ಬರು ರಾಜೀನಾಮೆ ಕೊಡುವ ದಿನಗಳೇನು ದೂರವಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಪ್ರತಿಭಟನೆಯುದ್ದೇಶಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ದಸಂಸ ಭೀಮವಾದದ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು, ಸಿಐಟಿಯುನ ಎಚ್ ನರಸಿಂಹ, ಮಹಿಳಾ ಕಾಂಗ್ರೆಸ್ನ ಶ್ಯಾಮಲಾ ಭಂಡಾರಿ, ಡಿವೈಎಫ್ಐನ ರಾಜೇಶ್ ವಡೇರಹೋಬಳಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಡಿ, ವಿನೋದ್ ಕ್ರಾಸ್ತಾ, ಗಣೇಶ್ ಶೇರುಗಾರ್, ಪುರಸಭಾ ಸದಸ್ಯ ಕೆ.ಜಿ ನಿತ್ಯಾನಂದ, ಕೇಶವ್ ಭಟ್, ಸಿಐಟಿಯುನ ಮಹಾಬಲ ವಡೇರಹೋಬಳಿ, ಬಲ್ಕೀಸ್ ಬಾನು, ರಾಜು ದೇವಾಡಿಗ, ರವಿ ವಿಎಂ, ಸಂತೋಷ್ ಹೆಮ್ಮಾಡಿ ಮೊದಲಾದವರು ಇದ್ದರು.