ಪುನರಪಿ ಲಾಕ್‍ ಡೌನ್ ಹೇರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳುತ್ತಾರೆ- ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಪುನರಪಿ ಲಾಕ್‍ ಡೌನ್ ಹೇರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳುತ್ತಾರೆ- ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ : ಕೊರೋನಾ ಪ್ರಾಬಲ್ಯ ಹೆಚ್ಚಾಗುತ್ತಿರುವ ಹಾಗೂ ಸಮುದಾಯ ಮಟ್ಟಕ್ಕೆ ಸೋಂಕು ಹರಡಬಹುದು ಎನ್ನುವ ಆತಂಕದ ಹಿನ್ನೆಲೆಯಲ್ಲಿ ಲಭ್ಯವಿರುವ ಆಸ್ಪತ್ರೆ, ಚಿಕಿತ್ಸಾ ಸೌಲಭ್ಯ, ಕ್ವಾರಂಟೈನ್, ಸೀಲ್‍ಡೌನ್ ಮಾಡುವ ವಿಧಾನಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಸ್ತ್ರತ ಚರ್ಚೆ ನಡೆಸಿ ಅಭಿಪ್ರಾಯ ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಮೀನುಗಾರಿಕಾ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಬುಧವಾರ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಾಲ ಕಾಲಕ್ಕೆ ಕೋವಿಡ್-19 ವೈರಸ್ ಹರಡುವುದನ್ನು ನಿಯಂತ್ರಣ ಮಾಡುವುದಕ್ಕೆ ಜಿಲ್ಲಾಡಳಿತ ಅಗತ್ಯವಿರುವ ಕ್ರಮಗನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಇರುವ ನಿಯಮಾವಳಿಗಳು ಮುಂದುವರೆಯುತ್ತಿದೆ. ಪುನರಪಿ ಲಾಕ್‍ಡೌನ್ ಹೇರಬೇಕು ಎನ್ನುವ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿದೆ. ನಿವೃತ್ತ ಅಧಿಕಾರಿಗಳು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರು ನಿಯಮಾವಳಿಗಳನ್ನು ಇನ್ನಷ್ಟು ಬಿಗಿ ಮಾಡುವ ಬಗ್ಗೆಯೂ ಸಲಹೆ ನೀಡಿದ್ದಾರೆ. ಜನ ಜೀವನ ತೊಂದರೆಯಾಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಚಿಂತನೆ ಇದ್ದು, ಮುಖ್ಯಮಂತ್ರಿಗಳು ಈ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯದ ಎಲ್ಲ ಸಚಿವರು ಹಾಗೂ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮಂಗಳೂರಿನಲ್ಲಿ ನಿವೃತ್ತ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಕರಾವಳಿಯ 3 ಜಿಲ್ಲೆಗಳ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮೀನುಗಾರಿಕೆಯ ಅತ್ಯಂತ ಸೂಕ್ಷ್ಮ ಪರಿಸ್ಥಿತಿ, ಕ್ರಮ ಬದ್ಧವಲ್ಲದ ಮೀನುಗಾರಿಕೆ, ಪಂಜರ ಕೃಷಿ ಸೇರಿದಂತೆ ಹಲವಾರು ಮೀನುಗಾರರ ಸಮಸ್ಯೆಯ ಕುರಿತು ವಿಸ್ತ್ರತ ಚರ್ಚೆ ನಡೆಸಲಾಗಿದೆ. ವಿದೇಶದಿಂದ ಉದ್ಯೋಗ ಕಳೆದುಕೊಂಡು ಬಂದಿರುವವರಿಗೆ ಹಾಗೂ ಇಲ್ಲಿರುವ ಯುವಕರಿಗೆ ಪಂಜರ ಕೃಷಿ ಹಾಗೂ ಇತರೆ ಮೀನುಗಾರಿಕೆಯ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ತಹಶೀಲ್ದಾರ್‍ಆನಂದಪ್ಪ ನಾಯ್ಕ್, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಕರುಣ ಪೂಜಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ, ಎಪಿಎಂಸಿ ಸದಸ್ಯ ಸುಧೀರ್‍ಕೆ.ಎಸ್, ಪುರಸಭಾ ಸದಸ್ಯ ಗಿರೀಶ್‍ದೇವಾಡಿಗ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್‍ಕಾವೇರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್‍ಬಿಲ್ಲವ ಇದ್ದರು.


Spread the love