ಪೆನ್ ಡ್ರೈವ್ ಪ್ರಕರಣ: ತನಿಖೆಗೆ ಎಸ್ ಐ ಟಿ ತಂಡ ರಚನೆ; ಇಲ್ಲಿದೆ ತನಿಖಾ ತಂಡದ ವಿವರ
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು, ಇದೀಗ ಈ ಪ್ರಕರಣತನಿಖೆಗೆ ರಾಜ್ಯ ಸರ್ಕಾರಎಸ್ಐಟಿ ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಿಐಡಿ ಡಿಜಿಪಿ ಮೇಲ್ವಿಚಾರಣೆಯಲ್ಲಿ ಮೂವರು ಎಸ್ಪಿ, ನಾಲ್ವರು DySP ಒಳಗೊಂಡ ಎಸ್ಐಟಿ ತಂಡವನ್ನು ರಚನೆ ಮಾಡಿ ಇಂದು (ಏಪ್ರಿಲ್ 28) ಆದೇಶ ಹೊರಡಿಸಲಾಗಿದ್ದು, ತನಿಖೆ ನಡೆಸಿ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಬಂದಿತ್ತು. ಇದರ ಮೇರೆ ಮಹಿಳಾ ಆಯೋಗವು, ಸಿಎಂ ಸಿದ್ದರಾಮಯ್ಯ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ತನಿಖೆ ಮಾಡಿಸಲು ಮನವಿ ಮಾಡಿತ್ತು. ಅದರಂತೆ ಸಿದ್ದರಾಮಯ್ಯ ಅವರು ಎಸ್ಐಟಿ ತನಿಖೆಗೆ ವಹಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಅಧಿಕೃತವಾಗಿ ಎಸ್ಐಟಿ ತಂಡವನ್ನು ರಚನೆ ಮಾಡಿ ಆದೇಶಿಸಿದ್ದಾರೆ.
ಹೊಳೆ ನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಮೊಕದ್ದಮೆ ತನಿಖೆಗಾಗಿ ಎಸ್ ಐಟಿ ರಚನೆ ಮಾಡಲಾಗಿದ್ದು, ಸಿಐಡಿ ಡಿಜಿಪಿ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ನೇತೃತ್ವದ ಎಸ್ ಐಟಿ ತಂಡದಲ್ಲಿ ಸಹಾಯಕ ಪೊಲೀಸ್ ಮಹಾ ನಿರ್ದೇಶಕಿ ಸುಮನ್ ಪೆನ್ನೇಕರ್ ಮತ್ತು ಮೈಸೂರು ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಮೂವರು ಎಸ್ಪಿ, ನಾಲ್ವರು ಡಿಸಿಪಿಗಳು ಇದ್ದಾರೆ.
ಪ್ರಜ್ವಲ್ ವಿರುದ್ಧ ಮೊದಲ ಎಫ್ಐಆರ್ ದಾಖಲು
ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮೊದಲ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 354A(ಲೈಂಗಿಕ ಕಿರುಕುಳ ಆರೋಪ), 354D(ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506(ಬೆದರಿಕೆ), 509(ಮಹಿಳೆ ಮಾನಕ್ಕೆ ಹಾನಿ) ಅಡಿ ಎಫ್ಐಆರ್ ದಾಖಲಾಗಿದ್ದು, ಇದರ ಆಧಾರದ ಮೇಲೆ ಎಸ್ಐಟಿ ತಂಡ ತನಿಖೆ ಕೈಗೊಳ್ಳಲಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದಿಷ್ಟು
ಇನ್ನು ಈ ಪ್ರಕರಣದ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿದ್ದು, ಹಾಸನದಲ್ಲಿ ಬೆಳಕಿಗೆ ಬಂದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಸಾವಿರಾರು ಹೆಣ್ಣು ಮಕ್ಕಳ ವಿಡಿಯೋ ಚಿತ್ರೀಕರಿಸಲಾಗಿದ್ದು ದೊಡ್ಡ ಅಪರಾಧ. ವಿಡಿಯೋ ಚಿತ್ರೀಕರಿಸಿದ್ದು ಹಾಗೂ ವಿಡಿಯೋ ಹಂಚಿಕೆ ಮಾಡಿದ ಇಬ್ಬರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಹಾಸನದ ಅಶ್ಲೀಲ ವಿಡಿಯೋಗೆ ಸಂಬಂಧಪಟ್ಟಂತೆ ಹಲವಾರು ಮಹಿಳಾ ಸಂಘಟನೆ, ಹೋರಾಟಗಾರರು ಮಹಿಳಾ ಆಯೋಗಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದರ ಸೂಕ್ಷ್ಮತೆಯನ್ನು ಅರಿತು ತನಿಖೆ ನಡೆಸುವಂತೆ ಕೂಡಲೇ ಒತ್ತಾಯಿಸಲಾಗಿದೆ. ಇದು ಸಾವಿರಾರು ಹೆಣ್ಣು ಮಕ್ಕಳು ಜೀವನ ಮತ್ತು ಬದುಕಿನ ಪ್ರಶ್ನೆ ಆಗಿದೆ. ಇದಕ್ಕೆ ನ್ಯಾಯ ಸಿಗಬೇಕು. ಈ ಪ್ರಕರಣ ಬೇರೆಯವರಿಗೆ ಮಾದರಿಯಾಗಬೇಕು. ಈ ಕೃತ್ಯಕ್ಕೆ ಶೂನ್ಯ ಸಹಿಷ್ಣತೆ ಇದೆ. ಯಾರಿಂದಲೂ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಅಪರಾಧಕ್ಕೆ ಶಿಕ್ಷೆ ಆಗಲೇಬೇಕು. ಒಂದು ಅಂದಾಜಿನ ಪ್ರಕಾರ ಸುಮಾರು 2,876 ಮಹಿಳೆಯರು ಈ ಪ್ರಕರಣದಲ್ಲಿ ಇದ್ದಾರೆ ಎಂದು ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.