ಪೇಜಾವರ ಸ್ವಾಮೀಜಿ ಜೀವನ ಸಂದೇಶ ಅನುಕರಣೀಯ – ಡಾ|ವೀರೆಂದ್ರ ಹೆಗ್ಗಡೆ

Spread the love

ಪೇಜಾವರ ಸ್ವಾಮೀಜಿ ಜೀವನ ಸಂದೇಶ ಅನುಕರಣೀಯ – ಡಾ|ವೀರೆಂದ್ರ ಹೆಗ್ಗಡೆ

ಉಡುಪಿ: ‘ಪೇಜಾವರ ಶ್ರೀಗಳು ಒಂದು ಕ್ಷೇತ್ರಕ್ಕೆ ಸೀಮಿತರಾಗದೇ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ದುಡಿದಿದ್ದಾರೆ. ದೇಹ ಎಂಬ ಶಕ್ತಿಯನ್ನು ಬಳಸಿಕೊಂಡು ಹೇಗೆ ಯಶಸ್ವಿ ಜೀವನ ನಡೆಸಬಹುದು ಎಂಬುದನ್ನು ಪೇಜಾವರ ಶ್ರೀಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು.

ಶನಿವಾರ ಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಪೇಜಾವರ ಶ್ರೀಗಳ ಸ್ಮರಣೆ ಕಾರ್ಯಕ್ರ ಮದಲ್ಲಿ ಮಾತನಾಡಿದ ಅವರು, ಶ್ರೀಗಳು ಬದುಕಿನ ಕೊನೆಯ ಕ್ಷಣದವರೆಗೂ ಅವಿರತವಾಗಿ ದೇಶದ ಉದ್ದಗಲ ಸಂಚರಿಸಿ ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ಮಾಡಿದರು. ಆರೋಗ್ಯದ ಬಗ್ಗೆ ಕಾಳಜಿ ತೋರದೇ ಸಮಾಜದ ಆರೋಗ್ಯದ ಬಗ್ಗೆ ಸದಾ ಚಿಂತಿಸುತ್ತಿದ್ದರು. ಶ್ರೀಗಳ ಸೇವೆಗೆ ಪ್ರತಿಯಾಗಿ ಸ್ಮಾರಕವನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಪೇಜಾವರ ಶ್ರೀಗಳ ಜೀವನ ಸಂದೇಶವೇ ಅನುಕರಣೀಯ. ಶ್ರೀಗಳ ನೆನಪು ಸದಾ ಅಚ್ಚಳಿಯದೆ ಉಳಿಯು ವಂತಾಗಲು ಅವರ ಹಾದಿಯಲ್ಲಿ ಸಾಗಬೇಕಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.

ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಸಮಾಜದ ನಡುವೆ ಇದ್ದುಕೊಂಡು ದೇವರ ಸೇವೆಯನ್ನೂ ಮಾಡಬಹುದು ಎಂದು ವಿಶ್ವಕ್ಕೆ ತೋರಿಸಿದವರು ವಿಶ್ವೇಶತೀರ್ಥ ಶ್ರೀಗಳು ಎಂದರು.

ಉದ್ಯಮಿ ಡಾ| ಜಿ ಶಂಕರ್ ಮಾತನಾಡಿ ಮುಂದಿನ ಪೀಳಿಗೆಗೆ ಪೇಜಾವರ ಶ್ರೀಗಳು ಯಾರು ಎಂಬುದನ್ನು ತಿಳಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಶ್ರೀಗಳ ವೃಂದಾವನವನ್ನು ನಿರ್ಮಿಸಬೇಕು ಎಂದು ಹೇಳಿದರು.

ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ವಿನಯಕುಮಾರ್ ಸೊರಕೆ, ಉದ್ಯಮಿ ಡಾ.ಜಿ.ಶಂಕರ್, ಮಾಹೆ ಸಹ ಕುಲಾಧಿಪತಿ ಎಚ್.ಎಸ್.ಬಲ್ಲಾಳ್, ಪೆರಂಪಳ್ಳಿ ವಾಸುದೇವ ಭಟ್ ಹಾಗೂ ಇತರರು ನುಡಿ ನಮನ ಸಲ್ಲಿಸಿದರು ಇದ್ದರು.


Spread the love