ಪೇಜಾವರ ಸ್ವಾಮೀಜಿ ನಿಧನಕ್ಕೆ ಉಡುಪಿ ಬಿಷಪ್ ಸಂತಾಪ

Spread the love

ಪೇಜಾವರ ಸ್ವಾಮೀಜಿ ನಿಧನಕ್ಕೆ ಉಡುಪಿ ಬಿಷಪ್ ಸಂತಾಪ

ಉಡುಪಿ: ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ನಿಧನಕ್ಕೆ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಯುಗ ಪ್ರವರ್ತಕ ಪೇಜಾವರ ಮಠದ ಪರಮಪೂಜ್ಯ ವಿಶ್ವೇಶ ತೀರ್ಥ ಸ್ವಾಮೀಜಿ ವಿಧಿವಶರಾದ ಸುದ್ಧಿ ನಮಗೆ ಆಘಾತ ಉಂಟು ಮಾಡಿದೆ, ಸರ್ವಶಕ್ತ ಕರುಣಾಮಯಿ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ.

ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣಗಳ ಮಧ್ಯೆ ಹೋರಾಡುತ್ತಿದ್ದ ಪೂಜ್ಯರನ್ನು ಕೊನೆಯ ಬಾರಿ ನೋಡುವ ಸದವಕಾಶ ನನಗೆ ಲಭಿಸಿತ್ತು. ಅವರು ಶೀಘ್ರ ಗುಣಮುಖರಾಗಿ ಭಗವಂತನ ಸೇವೆಯಲ್ಲಿ ತಮ್ಮನ್ನೇ ತೊಡಗಿಸಲಿ ಎಂದು ನಾನು ಪ್ರಾರ್ಥಿಸಿದ್ದೆ. ಆದರೆ ಭಗವಂತ ಇಂದು ಶ್ರೀಗಳನ್ನು ತನ್ನ ಸನ್ನಿಧಿಗೆ ಕರೆಸಿಕೊಂಡಿದ್ದಾನೆÉ.

ಉಡುಪಿ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ ತಮ್ಮ ವ್ಯಕ್ತಿತ್ವದ ಛಾಪು ಮೂಡಿಸಿದ್ದ ವಿಶ್ವೇಶ ತೀರ್ಥರು ವಿದ್ಯೆಯ ಪರ್ವತವೇ ಆಗಿದ್ದರು. ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶ ತೀರ್ಥರ ಸಮಕ್ಕೆ ನಿಲ್ಲಬಲ್ಲವರು ಬಹಳ ವಿರಳ ಎನ್ನಬಹುದು. ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ ಪ್ರಸಿದ್ಧರಾಗಿದ್ದರು. ಶ್ರೀಗಳನ್ನು ಕಾಡುತ್ತಿದ್ದ ಸಮಸ್ಯೆ ಅಸ್ಪೃಶ್ಯತೆ. ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದರ ವಿರುದ್ಧ ಅವರ ಒಳಮನಸ್ಸು ಸಿಡಿದೇಳುತ್ತಿತ್ತು. ಮಠದಲ್ಲಿ ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾನೂ ಉಂಡರು. ವೈಭವದ ಉತ್ತುಂಗ ಸ್ಥಿತಿಯಲ್ಲಿ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು. ಗಾಂಧೀಜಿಯ ವಿಚಾರಧಾರೆ ಅವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು ಎನ್ನುವುದಕ್ಕೆ ಅವರು ವೈಭವದ ಪೆÇೀಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗಿದ್ದುದು ಸಾಕ್ಷಿ.

ತನ್ನ ಧರ್ಮವನ್ನು ಪ್ರೀತಿಸಿ ಇತರ ಧರ್ಮಗಳನ್ನು ಗೌರವಿಸುವ ನಿಟ್ಟಿನಲ್ಲಿ ಶ್ರೀಗಳು ಆದರ್ಶಪ್ರಾಯವಾಗಿದ್ದರು. ಕ್ರೈಸ್ತ ಧರ್ಮಪ್ರಾಂತದ ಕಾರ್ಯಕ್ರಮಗಳಿಗೆ ಪ್ರೀತಿ, ಗೌರವದಿಂದ ಬಂದು ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ತಮಗೆ ಅನಿಸಿದ್ದನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದರು. ಅವರ ಈ ನೇರನುಡಿಯ ವ್ಯಕ್ತಿತ್ವವನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಅಷ್ಠಮಠಗಳ ಹಿರಿಯ ಯತಿಗಳಾಗಿ ಉಡುಪಿ ನಗರದಲ್ಲಿ ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡುವಲ್ಲಿ ಅವರ ಪಾತ್ರ ಹಿರಿದು. ಇದೀಗ ಉಡುಪಿ ನಗರದ ನಿವಾಸಿಗಳಿಗೆ ಅನಾಥ ಭಾವ ಕಾಡುತ್ತಿದೆ.

ಪೇಜಾವರ ಶ್ರೀಗಳು ಇನ್ನಿಲ್ಲ ಎಂಬುದು ನಿಜವಾದರೂ ನಂಬಲಾಗುತ್ತಿಲ್ಲ. ಈ ಶತಮಾನ ಕಂಡ ಮಹಾನ್ ಯತಿಗಳು ಅವರು ಎನ್ನುವುದು ಖಚಿತ. ಪರಮಪೂಜ್ಯ ಪೇಜಾವರ ಶ್ರೀಗಳ ನಿರ್ಗಮನದಿಂದ ಉಡುಪಿ ಕ್ರೈಸ್ತ ಧರ್ಮಪ್ರಾಂತವು ದುಃಖಿತವಾಗಿದೆ. ಅವರ ಜೀವಿಸಿದ ಮೌಲ್ಯಗಳು ಚಿರಕಾಲ ಬಾಳಲಿ ಎಂದು ಬಯಸುವಾಗ, ಅಸ್ತಂಗತ ಶ್ರೀಗಳಿಗೆ ಧರ್ಮಪ್ರಾಂತದ ಸಕಲ ಗುರುಗಳು ಹಾಗೂ ವಿಶ್ವಾಸಿಗಳ ಪರವಾಗಿ ಚಿರಶಾಂತಿಯನ್ನು ಕೋರುತ್ತೇನೆ. ಶಾಂತಿ! ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love