ಪೊಲೀಸರ ವಿಡಿಯೋ ವೈರಲ್ ಮಾಡಿದ ಕಾರು ಚಾಲಕಿ ವಿರುದ್ಧ ಪ್ರಕರಣ
ಕುಂದಾಪುರ : ಕೆಲ ದಿನಗಳ ಹಿಂದೆ ಸೀಟ್ ಬೆಲ್ಟ್ ಹಾಕಿದ್ದರೂ ದಂಡ ವಸೂಲಿ ಮಾಡಿರುವುದಾಗಿ ಆರೋಪಿಸಿ ಪೊಲೀಸರ ವಿಡಿಯೋವನ್ನು ವೈರಲ್ ಮಾಡಿದ ಕಾರು ಚಾಲಕಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.21ರಂದು ಕುಂದಾಪುರ ಠಾಣಾ ಎಎಸ್ಸೈ ತಾರಾನಾಥ್ ಎಂಬವರು ಹೈವೆ ಪ್ಯಾಟ್ರೋಲ್ ವಾಹನದಲ್ಲಿ ಹೆಮ್ಮಾಡಿ ಗ್ರಾಮದ ಸಮೃದ್ದಿ ಹೋಟೇಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕಿ ಶಾಂತಿ ಪಿಕಾರ್ಡೊ ಸೀಟ್ಬೆಲ್ಟ್ ಹಾಕಿಲ್ಲ ಎಂದು ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದರು.
ಅದಕ್ಕಾಗಿ 500ರೂ. ದಂಡ ಪಾವತಿಸುವಂತೆ ಸೂಚಿಸಿದಾಗ, ಸೀಟ್ ಬೆಲ್ಟ್ ಹಾಕಿರುವುದಾಗಿ ಹೇಳಿ ಪೊಲೀಸರಿಗೆ ಅವಾಚ್ಯವಾಗಿ ಬೈದು, ಆಕೆಯ ಕಾರಿನ ದಾಖಲಾತಿ ಹಾಗೂ ಇತರ ವಾಹನಗಳನ್ನು ತಪಾಸಣೆ ಮಾಡಲು ಬಿಡದೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ವೇಳೆ ಆಕೆ ಮೊಬೈಲ್ನಿಂದ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸರಕಾರಿ ಕರ್ತವ್ಯ ನಿರ್ವಹಿಸಲು ಮನಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿರುವುದಾಗಿದೆ ತಾರನಾಥ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.