ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ: ಕೆರೆಗೆ ಹಾರಿ ರಕ್ಷಿಸಿದ ಪೊಲೀಸ್ ಪೇದೆ

Spread the love

ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ: ಕೆರೆಗೆ ಹಾರಿ ರಕ್ಷಿಸಿದ ಪೊಲೀಸ್ ಪೇದೆ

ಚಿಕ್ಕಮಗಳೂರು(ವಾರ್ತಾಭಾರತಿ): ಪೊಕ್ಸೊ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿಯೊಬ್ಬ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಆತನನ್ನು ಬಂಧಿಸಿ ಕರೆತರುವ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭ ಪೊಲೀಸ್ ಪೇದೆಯೊಬ್ಬರು ಕೆರೆಗೆ ಹಾರಿ ರಕ್ಷಿಸಿದ ಘಟನೆ ಗುರುವಾರ ನರಸಿಂಹರಾಜಪುರ ತಾಲೂಕಿನಲ್ಲಿ ವರದಿಯಾಗಿದೆ.

ನರಸಿಂಹರಾಜಪುರ ತಾಲೂಕಿನ ಹಳೇ ಮಂಡಗದ್ದೆ ನಿವಾಸಿ ಚಿದಂಬರ ಆತ್ಮಹತ್ಯೆಗೆ ಯತ್ನಿಸಿದ ಆರೋಪಿಯಾಗಿದ್ದು, ಪೊಕ್ಸೊ ಪ್ರಕರಣವೊಂದರ ಆರೋಪಿಯಾಗಿರುವ ಈತ ಕಳೆದ ಕೆಲ ತಿಂಗಳುಗಳಿಂದ ಜಾಮೀನಿನ ಮೇಲೆ ಹೊರ ಬಂದಿದ್ದ. ಆದರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತ ನ್ಯಾಯಾಲಯದ ನೋಟಿಸ್‍ ಗೂ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ನ್ಯಾಯಾಲಯ ಈತನನ್ನು ಬಂಧಿಸುವಂತೆ ಆದೇಶ ನೀಡಿತ್ತು. ಆದೇಶದ ಮೇರೆಗೆ ಗುರುವಾರ ನರಸಿಂಹರಾಜಪುರ ಪಟ್ಟಣದ ಪೊಲೀಸ್ ಠಾಣೆಯ ಪೊಲೀಸರು ಹಳೇ ಮಂಡಗದ್ದೆ ಎಂಬಲ್ಲಿ ಚಿದಂಬರನನ್ನು ಬಂಧಿಸಿ ಕರೆತರುತ್ತಿದ್ದ ವೇಳೆ, ಆತ ದಾರಿ ಮಧ್ಯೆ ಕೆರೆಗೆ ಹಾರಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ತಿಳಿದು ಬಂದಿದೆ.

ಕೂಡಲೇ ಪೊಲೀಸ್ ಪೇದೆ ಸುರೇಶ್ ಕೆರೆಗೆ ಹಾರಿ ನೀರಿನಲ್ಲಿ ಮುಳುಗುತ್ತಿದ್ದ ಚಿದಂಬರನನ್ನು ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದ ಆರೋಪಿಯನ್ನು ಕೂಡಲೇ ನರಸಿಂಹರಾಜಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ತಿಳಿದುಬಂದಿದೆ.


Spread the love