ಪೋಕ್ಸೋ ಕೇಸ್​: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್

Spread the love

ಪೋಕ್ಸೋ ಕೇಸ್​: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್

ಧಾರವಾಡ: ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್​ ಸಿಕ್ಕಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಇಂದು (ಫೆಬ್ರವರಿ 07) ಆದೇಶ ಹೊರಡಿಸಿದೆ. ಇದರಿಂದ ಯಡಿಯೂರಪ್ಪ ಬಂಧನದ ಭೀತಿಯಿಂದ ಪಾರಾಗಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿದಿದ್ದು, ಇಂದಿಗೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಇದೀಗ ಧಾರವಾಡ ಹೈಕೋರ್ಟ್​ ಪೀಠ, ಪ್ರಕರಣ ರದ್ದು ಮಾಡುವ ಬದಲು ಕೇವಲ ಜಾಮೀನು ನೀಡಿದೆ. ಹೀಗಾಗಿ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಇನ್ನು ತಾಂತ್ರಿಕ ಕಾರಣಕ್ಕೆ ಈ ಪ್ರಕರಣವನ್ನು ಹೈಕೋರ್ಟ್​, ಪೋಕ್ಸೋ ಕೋರ್ಟ್​ಗೆ ವಾಪಸ್ ಮರಳಿಸಿದೆ. ಹೀಗಾಗಿ ಪೋಕ್ಸೋ ಕೋರ್ಟ್​​ನಲ್ಲಿ ಬಿಎಸ್​ವೈ ವಿಚಾರಣೆ ಎದುರಿಸಬೇಕಿದೆ.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2024ರ ಮಾರ್ಚ್ 3ರಂದು ಬಿಎಸ್​ವೈ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು. ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ನೀಡಿದ್ದರು. ಈ ನಡುವೆ ತಮ್ಮ ವಿರುದ್ಧದ ಪ್ರಕರಣ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.


Spread the love