ಪೋಡಿ ವಿಭಜನೆಗೆ ಲಂಚ – ಎಸಿಬಿ ಬಲೆಗೆ ಭೂಮಾಪನ ಅಧಿಕಾರಿ

Spread the love

ಪೋಡಿ ವಿಭಜನೆಗೆ ಲಂಚ – ಎಸಿಬಿ ಬಲೆಗೆ ಭೂಮಾಪನ ಅಧಿಕಾರಿ

ಉಪ್ಪಿನಂಗಡಿ: ಜಮೀನು ಪೋಡಿ ವಿಭಜನೆ (ಪ್ಲಾಟಿಂಗ್) ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಭೂಮಾಪನ ಅಧಿಕಾರಿ (ಸರ್ವೆಯರ್) ಶುಕ್ರವಾರ ಉಪ್ಪಿನಂಗಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಪುತ್ತೂರು ತಾಲ್ಲೂಕು ಕಚೇರಿಯ ಭೂ ಮಾಪನ ಇಲಾಖೆಯ ಅಧಿಕಾರಿ ಎಂ. ಶಿವಕುಮಾರ್ ಬಂಧಿತ ಆರೋಪಿ. ಹಿರೇಬಂಡಾಡಿ ಗ್ರಾಮದ ಗೋಪಾಲ ಮೊಗೇರ ಎಂಬುವರಿಂದ ಜಮೀನಿನ ಪೋಡಿ ಅಳತೆಗಾಗಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಕೆಡವಿದೆ.

‘ಗೋಪಾಲ ಮುಗೇರ ತನ್ನ ತಾಯಿ ಹಾಗೂ ಅಣ್ಣನ ಜಂಟಿ ಖಾತೆಯಲ್ಲಿದ್ದ ಜಮೀನಿನ ಪೋಡಿ ವಿಭಜನೆಗಾಗಿ 2015ರಲ್ಲಿ ಅರ್ಜಿ ಸಲ್ಲಿಸಿದ್ದರು. ನಾಲ್ಕು ವರ್ಷವಾದರೂ ಪೋಡಿ ವಿಭಜನೆ ಮಾಡಿಕೊಡಲು ಭೂಮಾಪನ ಇಲಾಖೆ ಮುಂದಾಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಭೂಮಾಪಕ ಎಂ. ಶಿವಕುಮಾರ್ ಇದಕ್ಕೆ ಹಲವರಿಗೆ ಹಣ ಕೊಡಲು ಇದ್ದು, ₹30 ಸಾವಿರ ಲಂಚ ನೀಡಬೇಕೆಂದು ಗೋಪಾಲ ಮೊಗೇರ ಅವರಲ್ಲಿ ಬೇಡಿಕೆ ಇಡಲಾಗಿತ್ತು. ಕೊನೆಗೆ₹ 20 ಕೊಡಲೇ ಬೇಕು. ಕಂತಿನಲ್ಲಿ ನೀಡಲು ಸೂಚಿಸಲಾಗಿತ್ತು’. ಈ ಬಗ್ಗೆ ಗೋಪಾಲ ಮೊಗೇರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಮೊದಲ ಕಂತಿನ ಹಣ ₹5 ಸಾವಿರವನ್ನು ಶುಕ್ರವಾರ ನೀಡುವುದಾಗಿ ಸರ್ವೆಯರ್ ಶಿವಕುಮಾರ್‌ಗೆ ತಿಳಿಸಿದ್ದು, ಇಲ್ಲಿಯ ಹೊಟೇಲ್ ಒಂದರ ಬಳಿ ಲಂಚ ಪಡೆಯುತ್ತಿದ್ದಾಗ ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪ್ರಭಾರ ಎಸ್ಪಿ ಸುಧೀರ್ ಹೆಗಡೆ, ಇನ್‌ಸ್ಪೆಕ್ಟರ್‌ಗಳಾದ ಯೋಗೀಶ್ ಕುಮಾರ್, ಶ್ಯಾಮಸುಂದರ್, ಪೊಲೀಸ್ ಸಿಬ್ಬಂದಿ ಹರಿಪ್ರಸಾದ್, ಕೆ. ರಾಧಾಕೃಷ್ಣ, ಉಮೇಶ್, ಡಿ. ರಾಧಾಕೃಷ್ಣ, ಪ್ರಶಾಂತ್, ವೈಶಾಲಿ, ರಾಕೇಶ್, ರಾಜೇಶ್ ಹಾಗೂ ಗಣೇಶ್ ಇದ್ದರು.


Spread the love