ಪೌರತ್ವ ಕಾಯಿದೆ ; ಉಡುಪಿ ಜಿಲ್ಲೆಯಲ್ಲಿ ಡಿ.21ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಪೌರತ್ವ ಕಾಯಿದೆ ; ಉಡುಪಿ ಜಿಲ್ಲೆಯಲ್ಲಿ ಡಿ.21ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ನಾಗರಿಕ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಜಾರಿಗೆ ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144ರಂತೆ ಡಿ.19ರಂದು ಬೆಳಿಗ್ಗೆ 6 ರಿಂದ ಡಿ.21ರಂದು ರಾತ್ರಿ 11 ಗಂಟೆವರೆಗೆ ನಿಷೇಧಾಜ್ಞೆ ಹೊರಡಿಸಿ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಡಿ.19ಮತ್ತು 20ರಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅಖಿಲ ಭಾರತ ಬಂದ್ಗೆ ಕರೆ ನೀಡಿರುವ ಬಗ್ಗೆ ಮಾಹಿತಿ ಇದ್ದು ಈ ಸಂದರ್ಭದಲ್ಲಿ ಮೆರವಣಿಗೆ, ಪ್ರತಿಭಟನೆ, ಕಾರ್ಯಕ್ರಮ ನಡೆಸಿದ್ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ ನಿಷೇಧಾಜ್ಞೆ ಹೊರಡಿಸಲಾಗಿದೆ.

ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು/ಲಾಠಿ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಯಾವುದೇ ಸ್ಫೋಟಕ ಒಯ್ಯುವುದನ್ನು ನಿಷೇಧಿಸಲಾಗಿದೆ.

ಯಾವುದೇ ವಿಜಯೋತ್ಸವ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭ ಏರ್ಪಡಿಸುವಂತಿಲ್ಲ. ಕಲ್ಲು ಎಸೆಯುವುದು, ವೇಗದಿಂದ ಒಗೆಯುವ ಸಾಧನ/ಉಪಕರಣ ಶೇಖರಿಸುವುದು, ರವಾನೆ ಮಾಡುವುದನ್ನು ನಿಷೇಧಿಸಿದೆ.

ವ್ಯಕ್ತಿಗಳ ಅಥವಾ ಅವರ ಆಕೃತಿ/ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ. ಅಪರಾಧ ಮಾಡಲು ಪ್ರಚೋದಿಸುವ ಬಹಿರಂಗ ಘೋಷಣೆ ಕೂಗುವುದು, ಹಾಡುವುದು, ಆವೇಷ ಭಾಷಣ ಮಾಡುವಂತಿಲ್ಲ. ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರ ಯಾವುದೇ ವಸ್ತು/ಪದಾರ್ಥ ತಯಾರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶದಲ್ಲಿ ತಿಳಿಸಿದ್ದಾರೆ.


Spread the love