ಪೌರತ್ವ ಕಾಯಿದೆ – ಮುನ್ನೆಚ್ಚರಿಕಾ ಕ್ರಮವಾಗಿ ಡಿ.18-20 ರವರೆಗೆ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ
ಮಂಗಳೂರು: ನಗರ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವಂತ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಡಿ. 18ರ ರಾತ್ರಿ 9 ಗಂಟೆಯಿಂದ 20 ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೆಗೊಳಿಸಿ ನಗರ ಪೊಲೀಸ್ ಆಯುಕ್ತ ಡಾ. ಹರ್ಷಾ ಅವರು ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕಾ ರಾಷ್ಟ್ರೀಯ ನೋಂದಣಿಯನ್ನು ಜಾರಿ ಮಾಡಿದ್ದು ಈ ಹಿನ್ನಲೆಯಲ್ಲಿ ವಿರೋಧ ವ್ಯಕ್ತಪಡಿಸಿ ದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ ಕಾರಣ ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಕೈಗೊಂಡಿರುವುದನ್ನು ವಿರೋಧಿಸಿ ಡಿ 16ರಂದು ನಗರದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಅನುಮತಿ ಪಡೆಯದೆ ಏಕಾಏಕಿಯಾಗಿ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿ ವಾಹನ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದ್ದು ಅಲ್ಲದೆ ಕೇಂದ್ರ ಸರಕಾರದ ಪೌರತ್ವ ಸಂರಕ್ಷಣಾ ಸಮಾವೇಶಕ್ಎಕ ಕರ್ನಾಟಕದ ಎಲ್ಲಾ ಸಂಘಟನೆಗಳು ವಿದ್ಯಾರ್ಥಿಗಳು ಭಾಗಿಯಾಗುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪ್ರಸಾರವಾಗುತ್ತಿದೆ.
ಕೇಂದ್ರ ಸರಕಾರದ ಮಸೂದೆಯ ವಿರುದ್ದ ಡಿ 19 ಮತ್ತು 20ರಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಕಮೀಷನರೇಟ್ ಘಟಕದ ವ್ಯಾಪ್ತಿಯ ಅತೀ ಸೂಕ್ಷ್ಮ ಪ್ರದೇಶವಾಗಿದ್ದು ಅಂತಹ ಮೆರವಣಿಗೆ/ಪ್ರತಿಭಟನೆ/ಕಾರ್ಯಕ್ರಮ ನಡೆಸಿದ್ದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆ ಇರುವ ಸಲುವಾಗಿ ಡಿ 18 ರ ರಾತ್ರಿ 9 ಗಂಟೆಯಿಂದ ಡಿ 20 ರ ರಾತ್ರಿ 12 ರ ವರೆಗೆ ನಿಷೇಧಾಜ್ಞೆಯನ್ನು ಹೊರಡಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಬಂದೂಕು, ಚಾಕು, ಕೋಲು/ಲಾಠಿ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಯಾವುದೇ ಸ್ಫೋಟಕ ಒಯ್ಯುವುದನ್ನು ನಿಷೇಧಿಸಲಾಗಿದೆ.
ಯಾವುದೇ ವಿಜಯೋತ್ಸವ ಸಾರ್ವಜನಿಕ ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭ ಏರ್ಪಡಿಸುವಂತಿಲ್ಲ. ಕಲ್ಲು ಎಸೆಯುವುದು, ವೇಗದಿಂದ ಒಗೆಯುವ ಸಾಧನ/ಉಪಕರಣ ಶೇಖರಿಸುವುದು, ರವಾನೆ ಮಾಡುವುದನ್ನು ನಿಷೇಧಿಸಿದೆ.
ವ್ಯಕ್ತಿಗಳ ಅಥವಾ ಅವರ ಆಕೃತಿ/ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ. ಅಪರಾಧ ಮಾಡಲು ಪ್ರಚೋದಿಸುವ ಬಹಿರಂಗ ಘೋಷಣೆ ಕೂಗುವುದು, ಹಾಡುವುದು, ಆವೇಷ ಭಾಷಣ ಮಾಡುವಂತಿಲ್ಲ. ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರ ಯಾವುದೇ ವಸ್ತು/ಪದಾರ್ಥ ತಯಾರಿಸುವುದು, ಪ್ರದರ್ಶಿಸುವುದು, ಪ್ರಸಾರ ಮಾಡುವಂತಿಲ್ಲ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶದಲ್ಲಿ ತಿಳಿಸಿದ್ದಾರೆ.