ಪೌರತ್ವ ಮಸೂದೆ ವಿರುದ್ದ ಪ್ರತಿಭಟನೆಗೆ ಅನುಮತಿ ಪಡೆಯುವುದು ಕಡ್ಡಾಯ-ಡಾ|ಹರ್ಷ

Spread the love

ಪೌರತ್ವ ಮಸೂದೆ ವಿರುದ್ದ ಪ್ರತಿಭಟನೆಗೆ ಅನುಮತಿ ಪಡೆಯುವುದು ಕಡ್ಡಾಯ-ಡಾ|ಹರ್ಷ

ಮಂಗಳೂರು: ನಾಗರಿಕ ಪೌರತ್ವ ಮಸೂದೆಯ ವಿರುದ್ದ ಯಾವುದೇ ಅನುಮತಿ ಪಡೆಯದೆ ಏಕಾಏಕಿ ರಸ್ತೆ ತಡೆದ ಮಾಡಿ ಸಾರ್ವಜನಿಕರಿಗೆ ಉಂಟುಮಾಡುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಕಮಿಷನರ್ ಡಾ ಹರ್ಷ ಎಚ್ಚರಿಕೆ ನೀಡಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನಾಗರಿಕ ಪೌರತ್ವ ಮಸೂದೆಯ ಬಗ್ಗೆ ದೇಶದ ಹಲವಾರು ಕಡೆದ ಪ್ರತಿಭಟನೆಗಳು ನಡೆಯುತ್ತಿದ್ದು ಮಂಗಳೂರು ನಗರದಲ್ಲಿ ಕೂಡ ಅನೇಕ ಸಂಘಟನೆಗಳು ಈ ಮಸೂದೆಯ ವಿರುದ್ದ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಸಂವಿಧಾನತ್ಮಕ ರೀತಿಯಲ್ಲಿ ಶಾಂತಿಪೂರ್ವಕ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಕೆಲವು ಸಂಘಟನೆಗಳು ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆಯದೆ ಏಕಾಏಕಿ ರಸ್ತೆ ತಡೆ ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿವುಂಟು ಮಾಡಿ, ಈ ಮಸೂದೆಯ ವಿರುದ್ದ ಆಕ್ಷೇಪಣೆಯನ್ನು ವ್ಯಕ್ತಪಡಿಸಿರುತ್ತಾರೆ. ಇದು ಕಾನೂನು ಬಾಹಿರ ಚಟುವಟಿಕೆ ಆಗಿದ್ದು, ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಈಗಾಗಲೇ ಜರುಗಿಸಲಾಗಿದೆ. ಮುಂದೆ ಕೂಡ ಈ ರೀತಿಯ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದವರ ಮೇಲೆ ಕಠಿಣ ಕ್ರಮವನ್ನು ಇಲಾಖೆಯಿಂದ ತೆಗೆದುಕೊಳ್ಳಲಾಗುವುದು. ಇದಲ್ಲದೆ ಕೆಲವರು ಹೊರದೇಶದಿಂದ ದೇಶದಇತರ ಭಾಗಗಳಿಂದ ಮತ್ತು ನಗರದಲ್ಲಿ ಕೂಡ ಸಾರ್ವಜನಿಕ ಜಾಲತಾಣಗಳಲ್ಲಿ ಈ ಮಸೂದೆಯ ವಿರುದ್ಧ ಧ್ವನಿ ಎತ್ತಲು ಮತ್ತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರೋತ್ಸಾಹಿಸಿ ಪ್ರಚೋದನಾಕಾರಿ ಸಂದೇಶಗಳನ್ನು ಹರಡಿಸುತ್ತಿರುವುದು ಕೂಡ ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಇದೂ ಕೂಡ ಅಸಂವಿಧಾನಿಕ ಹಾಗೂ ಕಾನೂನು ಬಾಹಿರ ಚಟುವಟಿಕೆ ಆಗಿದ್ದು, ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಲವು ಸಂಘಟನೆಗಳು ಮಂಗಳೂರು ನಗರದಲ್ಲಿ ಡಿಸೆಂಬರ್ 20 ಮತ್ತು 23 ರಂದು ಈ ಮಸೂದೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ/ಸಮಾವೇಶ ನಡೆಸುವ ಬಗ್ಗೆ ಮಾಹಿತಿಯನ್ನು ಪ್ರಚಾರ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಧಾರ್ಮಿಕ ಮುಖಂಡರುಗಳನ್ನು ಕರೆಯಿಸಿ ಅವರೊಡನೆ ಚರ್ಚೆ ನಡೆಸಲಾಗಿದೆ. ಯಾವುದೇ ಬೃಹತ್ ಪ್ರತಿಭಟನೆಗಳಿಗೆ ಯಾವುದೇ ಧರ್ಮದ ಮುಖಂಡರು ತಮ್ಮ ಸಹಕಾರ ಹಾಗೂ ಬೆಂಬಲವಿರುವುದಿಲ್ಲವಾಗಿಯೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ತಮ್ಮ ಸಮುದಾಯದವರ ಸಂಪೂರ್ಣ ಬೆಂಬಲ ಹಾಗೂ ಇರುವುದಾಗಿ ತಿಳಿಸಿರುತ್ತಾರೆ.

ಯಾರಿಗಾದರೂ ಸಂವಿಧಾನತ್ಮಕ ರೀತಿಯಲ್ಲಿ ಶಾಂತಿಯುತವಾಗಿ ಈ ಮಸೂದೆಯ ವಿರುದ್ದ ಪ್ರತಿಭಟನೆ ಮಾಡಬೇಕಾದಲ್ಲಿ ತಮ್ಮ ಕೋರಿಕೆ ಪತ್ರ ವನ್ನು ಉಪಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ಮಂಗಳೂರು ನಗರ ಇವರ ಕಛೇರಿಗೆ ಸಲ್ಲಿಸುವುದು. ಅಂತಹ ಅರ್ಜಿಗಳನ್ನು ಪರೀಶೀಲಿಸಿ ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆ ಇಲ್ಲದ ಪಕ್ಷದಲ್ಲಿ ದಿನಾಂಕ ಮತ್ತು ಸ್ಥಳ ನಿಗದಿಪಡಿಸಿ ಅನುಮತಿಯನ್ನು ನೀಡಲಾಗುವುದು ಎಂದರು.


Spread the love