ಪ್ರಕೃತಿ ಚಿಕಿತ್ಸೆಯ ಸಲುವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

Spread the love

ಪ್ರಕೃತಿ ಚಿಕಿತ್ಸೆಯ ಸಲುವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಮಂಗಳೂರು: ಚುನಾವಣೆ ಜಂಜಾಟದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆ ಪಡೆಯುವ ಸಲುವಾಗಿ ಶನಿವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಚುನಾವಣೆಯ ಸಂದರ್ಭದಲ್ಲಿ ಹಾಗೂ ಕಳೆದ ಐದು ವರ್ಷಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅವಿರತವಾಗಿ ಒಡಾಡಿ ಸಿದ್ದರಾಮಯ್ಯ ಮುಂದಿನ ಹತ್ತು ದಿನಗಳು ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದಾರೆ.

ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ಯಾವುದೇ ಕಾಯಿಲೆಯಿಲ್ಲ ಆದರೆ ದೇಹದ ವ್ಯವಸ್ಥೆಯನ್ನು ಸರಿಯಾಗಿ ಕಾಪಾಡಿಕೊಳ್ಳುವುದಕ್ಕಾಗಿ ಹತ್ತು ದಿನಗಳ ಕಾಲ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲಿದ್ದೇನೆ ಅಷ್ಟೇ ಎಂದರು.

ಜಯಮಾಲ ಅವರನ್ನು ವಿಧಾನಪರಿಷತ್ ಸಭಾ ನಾಯಕಿ ಮಾಡುವುದನ್ನು ವಿರೋಧಿಸಿ ಉಗ್ರಪ್ಪ ಮತ್ತು ಹೆಚ್.ಎಂ.ರೇವಣ್ಣ ಪತ್ರ ಬರೆದಿದ್ದಾರೆ ಎಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅದೆಲ್ಲ ಸುಳ್ಳು ಎಂದಿದ್ದಾರೆ. ಅಲ್ಲದೆ ಒಂದು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಈ ಬಗ್ಗೆ ನನ್ನಲ್ಲಿ ಕೇಳುವ ಬದಲು ಅವರನ್ನೇ ಕೇಳಿ ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಸುಳ್ಯದಲ್ಲಿ ನಕ್ಸಲರು ಕಾಣಿಸಿಕೊಂಡಿರುವ ಕುರಿತು ಜಿಲ್ಲಾ ಎಸ್ಪಿ ರವಿಕಾಂತೆಗೌಡ ಅವರಿಂದ ಮಾಹಿತಿಯನ್ನು ಪಡೆದುಕೊಂಡರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಹಾಗೂ ನೂರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.


Spread the love