ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ್ ಕಾರಂತ ವಿರುದ್ದ ಕ್ರಮ ಕೈಗೊಳ್ಳಿ ; ರಾಮಲಿಂಗ ರೆಡ್ಡಿ
ಮಂಗಳೂರು: ಪ್ರಚೋದನಾಕಾರಿ ಭಾಷಣ ಮಾಡುವ ಯಾವುದೇ ವ್ಯಕ್ತಿಯ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವ ರಾಮಲಿಂಗ ರೆಡ್ಡಿ ಸೂಚಿಸಿದ್ದಾರೆ.
ಅವರು ಬುಧವಾರ ನಗರದ ಪೋಲಿಸ್ ಆಯುಕ್ತರ ಕಚೇರಿಯಲ್ಲಿ ಪಶ್ಚಿಮ ವಲಯ ಮಟ್ಟದ ಹಿರಿಯ ಪೋಲಿಸ್ ಅಧಿಕಾರಿಗಳ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಸಂಪ್ಯ ಠಾಣೆಯ ಪೋಲಿಸ್ ಅಧಿಕಾರಿಗಳನ್ನು ನಿಂದಿಸಿ ಬಹಿರಂಗ ಬೆದರಿಕೆ ಹಾಕಿದ್ದ ಜಗದೀಶ್ ಕಾರಂತ್ ವಿರುದ್ದ ಯಾಕೆ ಇನ್ನೂ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸೂಚಿಸಿದ ಸಚಿವರು ಯಾವುದೇ ರಾಜಕೀಯ ಪಕ್ಷವೇ ಆಗಿದ್ದರೂ ಯಾವುದೇ ಸಂಘಟನೆ ಆಗಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗಿದೆ. ಇಂತಹ ವರ್ತನೆಗಳನ್ನು ಮುಂದುವರಿಸಲು ಬಿಟ್ಟರೆ ಅದು ದೊಡ್ಡದಾಗಿ ಬೆಳೆಯುತ್ತದೆ ಅಂತಹ ವರ್ತನೆಗಳಿಗೆ ಅವಕಾಶವೇ ನೀಡಬಾರದು ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತಂತೆ ಎಸ್ ಐ ಟಿ ಅಧಿಕಾರಿಗಳಿಗೆ ಸಾಕಷ್ಟು ಪುರಾವೆಗಳು ಲಭ್ಯವಾಗಿದೆಯಾದರೂ ನಿಖರ ಮಾಹಿತಿಗಳನ್ನು ಕಲೆಹಾಕಲು ಸಮಯಾವಕಾಶದ ಅಗತ್ಯವಿದೆ. ಆ ಕೆಲಸವನ್ನು ಮಾಡಲಾಗುತ್ತಿದೆ. ಕಲ್ಬುರ್ಗಿಯವರನ್ನು ಹತ್ಯೆ ಮಾಡಿದವರನ್ನೂ ಬಂಧಿಸುವ ಕಾರ್ಯ ಶೀಘ್ರ ನಡೆಯಲಿದೆ. ಸಿಟ್ ವಿಚಾರಣೆಯಲ್ಲಿ ಸರಕಾರವಾಗಲಿ ತಾವಾಗಲಿ ಮಧ್ಯಪ್ರವೇಶ ಮಾಡುವುದಿಲ್ಲ ನಮಗೆ ಬೇಕಾಗಿರುವುದು ಫಲಿತಾಂಶ ಎಂದರು.
ಎಡಿಜಿಪಿ ಅಲೋಕ್ ಮೋಹನ್, ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ನಗರ ಪೋಲಿಸ್ ಕಮೀಷನರ್ ಟಿ.ಆರ್. ಸುರೇಶ್, ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ, ದಕ ಎಸ್ಪಿ ಸುಧೀರ್ ರೆಡ್ಡಿ, ಉಡುಪಿ ಎಸ್ಪಿ ಡಾ.ಸಂಜೀವ್ ಪಾಟೀಲ್, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಹಾಗೂ ಇತರರು ಉಪಸ್ಥಿತರಿದ್ದರು.