ಪ್ರಚೋದನಾಕಾರಿ ಹೇಳಿಕೆ: ಕ್ಷಮೆ ಕೋರಿದ ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು : ಕಾರ್ತಿಕ್ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಭಾನುವಾರ ಕೊಣಾಜೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಜಿಲ್ಲೆಯ ಶಾಂತಿ ಕದಡುವ ಯಾವುದೇ ದುರುದ್ಧೇಶ ನನ್ನ ಹೇಳಿಕೆಯಲ್ಲಿ ಇರಲಿಲ್ಲ. ಆದಾಗ್ಯೂ ನೋವಿನಿಂದ ಆಡಿದ ಮಾತಿನ ಭರದಲ್ಲಿ ವ್ಯಕ್ತವಾದ ಕೆಲವು ಶಬ್ದಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅಮಾಯಕ ಹಿಂದೂ ಯುವಕರ ಹತ್ಯೆಯಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಕಾರ್ತಿಕ್ರಾಜ್ ಹತ್ಯೆ ನಡೆದು ಎರಡು ತಿಂಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಇದರಿಂದ ಸಹಜವಾಗಿಯೇ ಕಾರ್ಯಕರ್ತರಿಗೆ ನೋವಿದೆ. ಪೋಲಿಸ್ ಇಲಾಖೆಯನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗಿತ್ತು. ಉದ್ಧೇಶಪೂರ್ವಕವಾಗಿ ಯಾವುದೇ ಮಾತು ಆಡಿಲ್ಲ. ಜನತೆಯ ಭಾವನೆಯನ್ನು ಮಾತಿನ ಮೂಲಕ ವ್ಯಕ್ತ ಪಡಿಸಿದ್ದೇನೆ ಮನಸ್ಸಿನ ನೋವು ವ್ಯಕ್ತ ಪಡಿಸುವಾಗ ಕೆಲವು ಶಬ್ದಗಳು ತಪ್ಪಾಗಿರಬಹುದು. ಇದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಕ್ಷೇತ್ರದ ಸಂಸದನಾಗಿ ನನ್ನ ಜವಾಬ್ದಾರಿಯ ಪೂರ್ಣ ಅರಿವಿದೆ. ಜಿಲ್ಲೆಯ ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಅದೇ ರೀತಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಕಾರ್ತಿಕ್ರಾಜ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಎನ್ನುವುದಷ್ಟೇ ನಮ್ಮ ಆಗ್ರಹ. ನ್ಯಾಯ ಸಿಗದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಅನಿವಾರ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.