ಪ್ರತಾಪ್ ಚಂದ್ರ ಶೆಟ್ಟಿಗೆ ಸಚಿವಗಿರಿ ನೀಡುವಂತೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಒತ್ತಾಯ
ಉಡುಪಿ: ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಪ್ರತಾಪಚಂದ್ರ ಶೆಟ್ಟಿಯವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಸ್ಥಾನ ನೀಡಬೇಕೆಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಆಗ್ರಹಿಸಿದೆ.
ಪ್ರತಾಪ್ ಚಂದ್ರ ಶೆಟ್ಟಿಯವರು ಪಕ್ಷದ ಹಿರಿಯ ನಾಯಕರಾಗಿದ್ದು ಪಕ್ಷ ನಿಷ್ಠ ಹಾಗೂ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ. ಅಧಿಕಾರಕ್ಕಾಗಿ ಲಾಭಿಯಾಗಲಿ, ಈ ಹಿಂದೆ ಶಾಸಕರಾಗಿದ್ದಾಗ ಸಚಿವ ಸ್ಥಾನ, ನಿಗಮ ಮಂಡಳಿಯನ್ನಾಗಲಿ ಪಡೆದವರಲ್ಲ. ಇಂದಿನವರೆಗೂ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ, ಪಕ್ಷದ ನಾಯಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದಾರೆ.
ಪ್ರತಾಪಚಂದ್ರ ಶೆಟ್ಟಿಯವರು ಜಿಲ್ಲೆಯ ಒಬ್ಬ ಜಾತ್ಯಾತೀತ ನಾಯಕರಾಗಿದ್ದು ಅಪಾರ ಅನುಭವ ಹೊಂದಿದ ಹಿರಿಯ ಮುತ್ಸದ್ದಿಯಾಗಿದ್ದಾರೆ. ಸ್ಥಳಿಯಾಡಳಿತ ಸಂಸ್ಥೆಗಳ ಸದಸ್ಯರಿಂದ ಆಯ್ಕೆಯಾಗಿರುವ ಪ್ರತಾಪಚಂದ್ರ ಶೆಟ್ಟಿ ಜಿಲ್ಲೆ ಸಮಸ್ಯೆಗಳಾದ ಕೃಷಿ, ನಿರಾವರಿ, ಸಿ.ಆರ್.ಝಡ್., ಡೀಮ್ಡ್ ಫಾರೆಸ್ಟ್‍ನಂತಹ ಸಮಗ್ರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದು ಅವರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸ್ಥಾನ ದೊರೆತಲ್ಲಿ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ.
ರಾಜ್ಯದ ಮೈತ್ರಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಪ್ರತಾಪಚಂದ್ರ ಶೆಟ್ಟಿಯವರಲ್ಲಿ ವಿಶ್ವಾಸವಿರಿಸಿ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಬೇಕೆಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಆಗ್ರಹಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕಿ ಯೋಶನಿ ಒಲಿವರವರು ಹೇಳಿಕೆ ನೀಡಿರುತ್ತಾರೆ.