ಪ್ರತಿಭಟನಾ ನಿರತ ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗೆ ಎಸ್ ಡಿಪಿಐ ಆಗ್ರಹ
ಮಂಗಳೂರು: ಮಂಗಳೂರು ಕಮೀಷನರ್ ಕಚೇರಿಯ ಮುಂಬಾಗದಲ್ಲಿ ಪ್ರತಿಭಟನಾನಿರತ ಮುಸ್ಲಿಂ ನಾಯಕರು ಮತ್ತು ಕಾರ್ಯಕರ್ತರನ್ನು ಪೋಲಿಸರು ಲಾಠಿಚಾರ್ಜ್ ಮಾಡಿ ಅಕ್ರಮವಾಗಿ ಬಂಧಿಸಿರುವುದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದ್ದು, ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ನಾಯಕರು ಪ್ರತಿಭಟನೆಯ ವೇಳೆ ಪೋಲಿಸರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಸುಳ್ಳು ಹೇಳಿಕೆಯನ್ನು ಕಮೀಷನರ್ ನೀಡಿದ್ದು, ಇದು ಅಮಾಯಕ ಮುಸ್ಲಿಂ ಯುವಕನ ಮೇಲೆ ಕಿಡ್ನಿ ವೈಫಲ್ಯವಾಗುವರೆಗೂ ತೀವ್ರವಾಗಿ ಹಿಂಸಿಸಿದ ಪೋಲಿಸರನ್ನು ರಕ್ಷಿಸುವ ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಳೆ ಅಕ್ರಮವಾಗಿ ಮೊಕದ್ದಮೆ ದಾಖಲಿಸುವ ಷಡ್ಯಂತ್ರದ ಭಾಗವಾಗಿದ್ದು, ಇದು ಜವಾಬ್ದಾರಿಯುತ ಪೋಲಿಸ್ ಕಮಿಷನರ್ ಅವರ ತಾರತಮ್ಯದ ಧೋರಣೆಯಾಗಿದೆ ಮತ್ತು ಪ್ರತಿಭಟನಾ ನಿರತರಮೇಲೆ ಮಾಡಿರುವ ಆರೋಪ ನಿರಾಧರವಾಗಿದೆ. ಶಾಂತಿಯುತ ಪ್ರತಿಭಟನೆ ಮಾಡುತ್ತಿವರ ಮೇಲೆ ಪೋಲಿಸರು ಮನಸೋ ಇಚ್ಛೆ ಲಾಠಿಚಾರ್ಜ್ ನಡೆಸಿದ್ದಾರೆ ಎಂಬುದಕ್ಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವೀಡಿಯೋ ದೃಶ್ಯಗಳೆ ಸಾಕ್ಷಿ. ಪೋಲಿಸರ ಮೃಗೀಯ ವರ್ತನೆಯ ಲಾಠಿಚಾರ್ಜಿನಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 65ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 5 ಜನರು ಗಂಭೀರ ಗಾಯಗೊಂಡಿದ್ದಾರೆ.
ಸಿಸಿಬಿ ಪೋಲಿಸರು ಮಾರ್ಚ್ 21 ರಂದು ವಿಚಾರಣೆಯ ನೆಪದಲ್ಲಿ ಖರೇಷ್ ಅವರನ್ನು ಅಕ್ರಮವಾಗಿ ಬಂಧೀಸಿ ಬಳಿಕ ಆತನಿಗೆ ನಿರಂತರ ಚಿತ್ರಹಿಂಸೆ ನೀಡಿದ ಪರಿಣಾಮ ಕಿಡ್ನಿ ವೈಫಲ್ಯವಾಗಿರುವ ಕುರಿತು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪ್ರಸ್ತುತ ಆತನಿಗೆ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ ಕುಟುಂಬಸ್ಥರಿಗೆ ಖುರೇಷ್ ಬಂಧನದ ಬಗ್ಗೆ ಯಾವುದೇ ಮಾಹಿತಿ ನೀಡದೆ, ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸರ್ಚ್ ವಾರಂಟ್ ಅರ್ಜಿಗೂ ಮಾನ್ಯತೆ ನೀಡದೆ, ಖುರೇಷ್ ಬಗ್ಗೆ ಮಾಹಿತಿ ಪಡೆಯಲು ತೆರಳಿದ್ದ ಕುಟುಂಬಸ್ಥರಿಗೂ ಪೋಲಿಸರು ಬೆದರಿಕೆ ಒಡ್ಡಿದ್ದಾರೆ. ಬಂಧನದ ಬಳಿಕ ಸಿಸಿಬಿ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಸಮ್ಮುಖದಲ್ಲಿಯೇ ಪೋಲಿಸ್ ಸಿಬಂಧಿಗಳು ತನಗೆ ದೈಹಿಕ ಹಿಂಸೆ ನೀಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿ ತೀವ್ರ ರೀತಿಯಲ್ಲಿ ಹಿಂಸಿದ್ದಾರೆ ಎಂದು ಖುರೇಷ್ ಅವರೇ ಹೇಳಿಕೆ ನೀಡಿದ್ದಾರೆ. ಜೊತೆಗೆ ಅನ್ನ ನೀರು ನೀಡದೆ ಅಧಿಕಾರಿಗಳು ಅಮಾನವೀಯ ರೀತಿಯಲ್ಲಿ ವರ್ತಿಸಿದ್ದಾರೆ ಎಂದೂ ಹೇಳಿದ್ದಾರೆ. ಕುಟುಂಬಸ್ಥರ ಒತ್ತಡದ ಬಳಿಕವಷ್ಠೆ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿಸಿ ಮಾರ್ಚ್ 27 ರಂದು ಪೋಲಿಸರು ನ್ಯಾಯಾಧೀಶರ ಮನೆಗೆ ಕೊಂಡು ಹೋಗಿ ನ್ಯಾಯಾಂಗ ಬಂಧನ ಕ್ಕೆ ಒಪ್ಪಿಸಿದ್ದಾರೆ.
ಚಿತ್ರಹಿಂಸೆಯ ಬಗ್ಗೆ ನ್ಯಾಯಾಧೀಶರಲ್ಲಿ ಮತ್ತು ವೈದ್ಯಾಧಿಕಾರಿಗಳಲ್ಲಿ ಹೇಳಬಾರದೆಂದು ಪೋಲಿಸರು ತನ್ನನ್ನು ಬೆದರಿಸಿದ್ದು ಒಂದು ವೇಳೆ ಇದನ್ನು ಬಹಿರಂಗಪಡಿಸಿದರೆ, ಎನ್ ಕೌಂಟರ್ ಮಾಡುವ ಬೆದರಿಕೆ ಮತ್ತು ಕಾರ್ತಿಕ್ ರಾಜ್ ಎಂಬಾತನ ಕೊಲೆ ಪ್ರಕರಣದಲ್ಲಿ ಫಿಕ್ಸ್ ಮಾಡುವ ಬೆದರಿಕೆಯನ್ನು ಪೋಲಿಸರು ಒಡ್ಡಿದ್ದಾಎ. ಈ ರೀತಿಯಾಗಿ ಪೋಲಿಸರ ಅಮಾಯಕ ಮುಸ್ಲಿಂ ಯುವಕರ ಮೇಲೆ ದೈಹಿಕವಾಗಿ ದೌರ್ಜನ್ಯ ನಡೆಸಿ ಮುಸ್ಲಿಂ ವಿರೋಧಿ ಧೋರಣೆಯನ್ನು ನಡೆಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಆದುದರಿಂದ ಆಡಳಿತ ವ್ಯವಸ್ಥೆಯ ಕೂಡಲೇ ಎಚ್ಚೆತ್ತುಕೊಂಡು ಗಂಭೀರ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಸಿಸಿಬಿ ಇನ್ಸ್ ಪೆಕ್ಟರ್ ಗಳಾದ ಸುನೀಲ್ ನಾಯ್ಕ ಹಾಗೂ ಸಬ್ ಇನ್ಸ್ ಪೆಕ್ಟರ್ ಶಾಂ ಸುಂದರ್ ಸೇರಿದಂತಿ ತಪ್ಪಿತಸ್ಥ ಪೋಲಿಸ್ ಸಿಬಂದಿಗಳನ್ನು ಈಕೂಡಲೇ ಅಮಾನತುಗೊಳಿಸಿ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕು ಅಲ್ಲದೆ ಅಕ್ರಮವಾಗಿ ಬಂಧಿಸಿಲಾಗಿರುವ ಪ್ರತಿಭಟನಾಕಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಈ ಬೇಡಿಕೆಗಳಿಗೆ 3 ದಿನಗಳಲ್ಲಿ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ, ಎಸ್ ಡಿಪಿಐ ವತಿಯಿಂದ ತೀವ್ರ ರೀತಿಯ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಅಲ್ಫೋನ್ಸ್ ಫ್ರಾಂಕೊ, ಹನೀಫ್ ಖಾನ್ ಕೊಡಾಜೆ, ಎಂ ಕೂಸಪ್ಪ, ಇಕ್ಬಾಲ್ ಬೆಳ್ಳಾರೆ, ನಾಸಿರ್ ಸಜಿಪ, ಇಕ್ಬಾಲ್, ಅಝಾಜ್ ಕೃಷ್ಣಾಪುರ, ನಿಶಾದ್ ಹಾಗೂ ಇತರರು ಉಪಸ್ಥಿತರಿದ್ದರು.