ಪ್ರತಿಭಟನೆಯ ವೇಳೆಯ ಕಸವನ್ನು ಶುಚಿಗೊಳಿಸಿ ಶಿಸ್ತಿನ ಸಿಪಾಯಿಗಳಾದ ಕಡಲ ಮಕ್ಕಳು!
ಉಡುಪಿ: ಕಾಣೆಯಾದ ಕಡಲಮಕ್ಕಳು ಎಲ್ಲಿದಾರೋ ಗೊತ್ತಿಲ್ಲ…ನಮ್ಮವರನ್ನು ಹುಡುಕಿಕೊಡಿ ಅಂತ ಐವತ್ತು ಸಾವಿರ ಮೀನುಗಾರರು ರಣಬಿಸಿಲಲ್ಲಿ ಬೆವರಿಂಗಿಸಿ ಉಡುಪಿಯಲ್ಲಿ ಪ್ರತಿಭಟನೆ ಮಾಡಿದರು. ದಾರಿಯುದ್ದಕ್ಕೂ ಕುಡಿಯಲು ನೀರಿನ ಬಾಟಲಿ, ದಾಹ ತಣಿಸಲು ಮಜ್ಜಿಗೆ ವಿತರಣೆಯಾಗುತ್ತಿತ್ತು. ಕುಡಿದ ನೀರಿನ ಬಾಟಲಿ ಹಾಗೂ ಮಜ್ಜಿಗೆ ತೊಟ್ಟೆಗಳನ್ನು ತಾವೇ ಸ್ವಚ್ಚಗೊಳಿಸುವ ಮೂಲಕ ಮಾದರಿಯಾದರು.
ಸಾಗರೋಪಾದಿಯಲ್ಲಿ ಸೇರಿದ ಮೀನುಗಾರರು ಮಲ್ಪೆಯಿಂದ ಉಡುಪಿಯ ಅಂಬಲಪಾಡಿ ಜಂಕ್ಷನ್ ವರೆಗೆ ಸುಮಾರು 8 ಕಿಮೀ ಪಾದಯಾತ್ರೆಯಲ್ಲಿ ಶಿಸ್ತಿನಿಂದ ಯಾವುದೇ ರೀತಿಯ ಅಶಿಸ್ತಿಗೆ ಕಾರಣವಾಗದಂತೆ ಸರ್ವರಿಗೂ ಮಾದರಿಯಾದರು.
ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಡುಬಿಸಿಲಲ್ಲಿ ಜನಪ್ರತಿನಿಧಿಗಳು, ಮೀನುಗಾರ ಮುಖಂಡರು ಮಾತನಾಡುತ್ತಿದ್ದರೆ ಹೃದಯದಲ್ಲಿ ತನ್ನ ಸಹೋದರರನ್ನು ಕಳೆದು ಕೊಂಡ ನೋವಿದ್ದರೂ ಕೂಡ ಶಿಸ್ತಿನಿಂದ ಕುಳಿತು ಮೌನವಾಗಿದ್ದು ಶಿಸ್ತನ್ನು ಮೆರೆದರು.
ಮೆರವಣಿಗೆ, ಸಭೆ ಮುಗಿದು ಮನೆ ಸೇರುವ ಮುನ್ನ ಅಲ್ಲಿದ್ದ ಮೀನುಗಾರರೇ ಸೇರಿ ಕಸದ ಬಾಟಲಿ ಗಳನ್ನು ಹೆಕ್ಕಿ ಗುಡ್ಡೆಹಾಕಿ ಸ್ವಚ್ಛ ಮಾಡಿ, ಜನರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟು ಅಲ್ಲೂ ಶಿಸ್ತು ಮೆರೆಯಲಾಯ್ತು.
ಜೊತೆಗಾರರು ಕಣ್ಮರೆಯಾದ ನೋವಿನಲ್ಲೂ ತಾವು ಹಾಕಿದ ಕಸ ತಾವೇ ಹೆಕ್ಕಿದ, 5 ಗಂಟೆಗಳ ಕಾಲ ಅದೆಲ್ಲೂ ಅಶಿಸ್ತು ತೋರದ ಮೀನುಗಾರರ ದೊಡ್ಡತನ ಎಲ್ಲರಿಗೂ ಮಾದರಿ.