ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ
ಚಿತ್ರಗಳು: ಪ್ರಸನ್ನ ಕೊಡವೂರು
ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಅಧಿಕಾರ ಇರಲಿ, ಇಲ್ಲದಿರಲಿ ಸೇವಾಗುಣ ಎಂಬುದು ಜನ್ಮಜಾತವಾಗಿದೆ ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಹುಟ್ಟುಹಬ್ಬದ ನಿಮಿತ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಮೋದ್ ಮಧ್ವರಾಜ್ ಅಧಿಕಾರದಲ್ಲಿ ಇರಲಿ ಇಲ್ಲದೆ ಹೋಗಲಿ ನಿರಂತರವಾಗಿ ಬಡವರ ಬಗ್ಗೆ ಕಾಳಜಿಯನ್ನು ಹೊಂದಿ ಅವರಿಗೆ ನಿರಂತರ ಸೇವೆ ನೀಡುತ್ತಾ ಬಂದಿದೆ. ಅವರ ಸೇವಾಗುಣ ರಕ್ತಗತವಾಗಿದ್ದು ಇಂತಹ ಸೇವೆ ಸದಾ ಮುಂದುವರೆಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಉಡುಪಿ ಕೆಥೋಲಿಕ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರೆ|ಫಾ| ಲಾರೆನ್ಸ್ ಡಿಸೋಜಾ ಮಾತನಾಡಿ, ಸೌಲಭ್ಯ ವಂಚಿತರ ಬಗ್ಗೆ ಪ್ರಮೋದ್ ಅವರಿಗೆ ವಿಶೇಷ ಕಾಳಜಿ ಇದ್ದು, ಸಮಷ್ಠಿಹಿತದ ಕನಸು ಕಂಡಿದ್ದಾರೆ. ಅವರ ಪ್ರಜಾಪ್ರಭುತ್ವದ ನಿಲುವು ಯುವಜನರಿಗೆ ಆದರ್ಶ ಎಂದು ಹೇಳಿದರು.
ಜೊಕ್ಕಬೆಟ್ಟು ಜುಮ್ಮಾ ಮಸೀದಿ ಧರ್ಮಗುರು ಅಬ್ದುಲ್ ದಾರಿಮಿ ಕಲ್ಲೇಗ ಮಾತನಾಡಿ, ಪ್ರಪಂಚದ ಇತರ ದೇಶಗಳಿಗೆ ಬೇರೆ ಬೇರೆ ವಿಶೇಷತೆ ಕಾಣಲು ತೆರಳುತ್ತಾರೆ. ಆದರೆ ಆತ್ಮಜ್ಞಾನವನ್ನು ಕಾಣಬೇಕಾದರೆ ಭಾರತಕ್ಕೆ ಬರಬೇಕು. ಮಾನವೀಯ ಮೌಲ್ಯಗಳ ಸುಂದರ ದೃಶ್ಯಕಾಣಬೇಕಾದರೆ ಉಡುಪಿಗೆ ಬರಬೇಕು. ಇದಕ್ಕೆ ಕಾರಣ ಪ್ರಮೋದ್ ಅವರಂತಹ ಕರ್ಮಯೋಗಿಗಳು. ಅವರು ಎಲ್ಲರನ್ನೂ ಬೆಸೆಯುವ ದಾರದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನೈಜ ಆರ್ಥದಲ್ಲಿ ಹುಟ್ಟುಹಬ್ಬ ಸಂತೋಷದ ವಿಚಾರವಲ್ಲ. ಯಾಕೆಂದರೆ ವರ್ಷದಿಂದ ವರ್ಷಕ್ಕೆ ಆಯುಷ್ಯದ ಅವಧಿ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ಹುಟ್ಟಿದ್ದೇ ಜನಸೇವೆಗೆ ಎಂಬ ಭಾವನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಲಾಡಿ ಅಜಿತ್‍ಕುಮಾರ್ ರೈ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕೆಎಂಸಿ ಯುರೋಲಜಿ ವಿಭಾಗದ ಮುಖ್ಯಸ್ಥ ಡಾ. ಪದ್ಮರಾಜ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸಮಾಜ ಸೇವಾ ಸಂಘದ ರಾಜ್ಯಾಧ್ಯಾಕ್ಷ ರಾಹುಲ್ ಮೊದಲಾದವರು ಉಪಸ್ಥಿತರಿದ್ದರು.