ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಗೋರಕ್ಷಣೆ ಹೆಸರಿನಲ್ಲಿ ಸಂಘ-ಪರಿವಾರ ನಡೆಸುತ್ತಿರುವ ದುಷ್ಕ್ರತ್ಯಗಳನ್ನು ಖಂಡಿಸಿ ಪ್ರತಿಭಟನೆ

Spread the love

ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಗೋರಕ್ಷಣೆ ಹೆಸರಿನಲ್ಲಿ ಸಂಘ-ಪರಿವಾರ ನಡೆಸುತ್ತಿರುವ ದುಷ್ಕ್ರತ್ಯಗಳನ್ನು ಖಂಡಿಸಿ ಪ್ರತಿಭಟನೆ

ಮಂಗಳೂರು : ಉಡುಪಿ ಜಿಲ್ಲೆಯ ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಗೋರಕ್ಷಣೆಯ ಹೆಸರಿನಲ್ಲಿ ಸಂಘ ಪರಿವಾರವು ದೇಶಾದ್ಯಂತ ನಡೆಸುತ್ತಿರುವ ದುಷ್ಕøತ್ಯಗಳನ್ನು ಖಂಡಿಸಿ  ಪಕ್ಷಗಳ ಜಂಟಿ ನೇತೃತ್ವದಲ್ಲಿ ನಗರದಲ್ಲಿಂದು(29-08-2016) ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು.

praveen poojary protest

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಾತ್ಯಾತೀತ ಜನತಾದಳದ ದ.ಕ. ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞರವರು, ಕಳೆದ ಎರಡು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದಂದಿನಿಂದ ಹಿಂದೂತ್ವವನ್ನು ಕಾರ್ಯಗತಗೊಳಿಸುವ ಸಂಘ ಪರಿವಾರದ ಚಟುವಟಿಕೆಗಳು ಹೆಚ್ಚುತ್ತಲೇ ಹೋಗಿವೆ. ನರೇಂದ್ರ ದಾಬೋಲ್ಕರ ಅವರ ಕೊಲೆಯ ಬೆನ್ನಲ್ಲೇ ಇನ್ನಿಬ್ಬರು ವಿಚಾರವಾದಿಗಳಾದ ಗೋವಿಂದ ಪಾನ್ಸರೆ ಮತ್ತು ಪ್ರೊ.ಎಂ.ಎಂ. ಕಲಬುರ್ಗಿಯವರ ಕೊಲೆಗಳು ನಡೆದಿವೆ. ಮುಸ್ಲಿಂ ಅಲ್ಪಸಂಖ್ಯಾಕರ ಮೇಲಿನ ದಾಳಿಗಳು ಉತ್ತರಪ್ರದೇಶದ ದಾದ್ರಿ ಘಟನೆಯಲ್ಲಿ ತನ್ನ ಪೈಶಾಚಿಕ ಉತ್ತುಂಗವನ್ನು ತಲುಪಿದೆ. ದಾದ್ರಿಯಲ್ಲಿ ದನದ ಮಾಂಸವನ್ನು ಮನೆಯೊಳಗೆ ಇಟ್ಟುಕೊಂಡಿದ್ದ ಆರೋಪ ಹೊರಿಸಿ ಮನೆಯ ಯಜಮಾನ ಮಹಮ್ಮದ್ ಅಖ್ಲಾಕ್ ಎಂಬ ಮಧ್ಯ ವಯಸ್ಕ ಗೋಹತ್ಯೆ ಮಾಡಿದ್ದಾನೆಂದು ಗ್ರಾಮಸ್ಥರನ್ನು ನಂಬಿಸಿ, ಸ್ಥಳೀಯ ಬಿಜೆಪಿ ಕಾರ್ಯಕರ್ತನ ಪ್ರಚೋದನೆಯಿಂದ ಹಿಂದೂತ್ವವಾದಿ ಪಡೆಗಳು ಮಹಮ್ಮದ್ ಅಖ್ಲಾಕ್‍ನ ಮೇಲೆ ದಾಳಿ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಉತ್ತರ ಪ್ರದೇಶ ಮತ್ತು ಉತ್ತರದ ರಾಜ್ಯಗಳಲ್ಲಿ ದಲಿತರಿಬ್ಬರನ್ನು ನೇಣು ಹಾಕಿದ ಪ್ರಕರಣ, ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ ಪ್ರಕರಣಗಳು ಮೇಲೆ ಮೇಲೆ ನಡೆದಿವೆ. ಇಂಥ ಬರ್ಬರತೆಯ ಶಿಖರವೆಂಬಂತೆ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಪಡಿಸಿದ ಅವರ ‘ಆದರ್ಶ’ ರಾಜ್ಯ ಗುಜರಾತಿನಲ್ಲಿ, ಅಲ್ಲಿನ ಉನಾ ತಾಲೂಕಿನ ಗ್ರಾಮವೊಂದರಲ್ಲಿ ಸತ್ತ ದನದ ಚರ್ಮ ಸುಲಿಯುವ ತಮ್ಮ ಜಾತಿ ವೃತ್ತಿಯನ್ನು ಮಾಡಿದ ದಲಿತರ ಮೇಲೆ ಅಲ್ಲಿನ ಮೇಲ್ವರ್ಗದ ಹಿಂದೂತ್ವ ಪಡೆಗಳು ಹಲ್ಲೆ ಮಾಡಿದ್ದಲ್ಲದೆ, ಅವರಲ್ಲಿ ನಾಲ್ವರನ್ನು ಉನಾ ಪಟ್ಟಣಕ್ಕೆ ಕೈಕಟ್ಟಿ ತಂದು, ಸಾರ್ವಜನಿಕರ ಸಮ್ಮುಖ ಬಟ್ಟೆ ಕಳಚಿ ಭೀಕರವಾಗಿ ಹೊಡೆದುದಲ್ಲದೆ, ತಮ್ಮ ಕೃತ್ಯವನ್ನು ಸಾಹಸವೆಂಬಂತೆ ವೀಡಿಯೋಗಳಲ್ಲಿ ಚಿತ್ರೀಕರಿಸಿರುವುದು ದೇಶದಾದ್ಯಂತ ಪ್ರಸಾರವಾಗಿದೆ. ಮುಂಬಯಿಯಲ್ಲಿ ಡಾ| ಬಿ.ಆರ್. ಅಂಬೇಡ್ಕರ್‍ರವರೇ ಸ್ಥಾಪಿಸಿದ್ದ ಕಚೇರಿ ಕಟ್ಟಡ ಚಾರಿತ್ರಿಕ ಅಂಬೇಡ್ಕರ್ ಭವನ ಹಾಗೂ ಅವರೇ ಸ್ಥಾಪಿಸಿದ ಬುದ್ಧ ಭೂಷಣ ಮುದ್ರಣಾಲಯವನ್ನು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರವೇ ಜೂನ್ 25ರಂದು ಕೆಡವಿ ಹಾಕಿದೆ. ಹಿಂದೂತ್ವದ ರಾಷ್ಟ್ರೀಯತೆಯ ಅಜೆಂಡಾದಲ್ಲಿ ಮುಸ್ಲಿಮರಿಗೆ, ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ, ವಿಚಾರವಾದಿಗಳಿಗೆ ಸ್ಥಾನವಿಲ್ಲ ಎಂದು ಹೇಳಿದರು.

ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಮಾತನಾಡುತ್ತಾ, ಕೋಮು ವಿಷಬೀಜವನ್ನು ಬಿತ್ತಿ ಕೋಮುಜ್ವಾಲೆ ಹಬ್ಬಿಸುವ ಮೂಲಕ ಕರಾವಳಿ ಜಿಲ್ಲೆಗಳನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಿದೆ. ಹತ್ತು ವರ್ಷಗಳ ಹಿಂದೆ ಆದಿ ಉಡುಪಿಯಲ್ಲಿ ದನ ಮಾರಾಟ ಸಾಗಾಣಿಕೆ ಮಾಡುತ್ತಿದ್ದ ಹಾಜಬ್ಬ ಮತ್ತು ಹಸನಬ್ಬ ಎಂಬಿಬ್ಬರನ್ನು ಹಿಂದೂತ್ವದ ಪಡೆಗಳು ಸಂಪೂರ್ಣ ಬಟ್ಟೆ ಕಳಚಿ ಹಲ್ಲೆ ಮಾಡಿ ಫೋಟೋ ತೆಗೆದು ಪ್ರಸಾರ ಮಾಡಿದ್ದು ಬಹುಶಃ ಗೋರಕ್ಷಕರೆನಿಸಿಕೊಂಡವರ ಮೊದಲ ಸಾಹಸ. ಅದರ ಬಳಿಕ ಉಡುಪಿ ಮತ್ತು ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳ ಗ್ರಾಮಾಂತರ ಭಾಗಗಳಲ್ಲಿ ಸಂಘ ಪರಿವಾರದ ವಿವಿಧ ಸೇನೆ, ದಳ, ವೇದಿಕೆಗಳು ಗೋಸಾಗಾಟಗಾರರನ್ನು ಆಗೀಗ ತಡೆದು ಹಲ್ಲೆ ಮಾಡಿ ತಾವೇ ಪೊಲೀಸರಿಗೆ ವರದಿ ಮಾಡುವುದು ನಡೆಯುತ್ತಿದೆ. ಇಂಥ ನಕಲಿ ಗೋರಕ್ಷಕರ ಕಾನೂನುಬಾಹಿರ ಪೊಲೀಸ್‍ಗಿರಿಯನ್ನು ಪೊಲೀಸ್ ಇಲಾಖೆಯವರೇ ಬೆಂಬಲಿಸುತ್ತ, ಗೋ ಮಾರಾಟವನ್ನು ವೃತ್ತಿ ಮಾಡಿಕೊಂಡಿರುವ ಮುಸ್ಲಿಮರ ಮೇಲೂ, ಹಿಂದೂಗಳ ಮೇಲೂ ಪ್ರಕರಣಗಳನ್ನು ಪೊಲೀಸ್ ಠಾಣೆಗಳಲ್ಲಿ ದಾಖಲಿಸುವುದೂ ನಡೆದಿದೆ. ಕರಾವಳಿ ಜಿಲ್ಲೆಗಳ ಜನತೆ ಈ ದಾಂದಲೆಕೋರರ ಎದುರು ಅಸಹಾಯಕರಾಗಿದ್ದಾರೆ. ಹಿಂದೂತ್ವದ ಅಮಲು ಏರಿಸಿಕೊಂಡ ಕೆಳವರ್ಗದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಂಘ ಪರಿವಾರದ ಇನ್ನೊಂದು ಗುಂಪಾದ ಬಿಜೆಪಿಯ ಕಾರ್ಯಕರ್ತನನ್ನೇ ಅದರಲ್ಲೂ ಹಿಂದುಳಿದ ಜಾತಿಯವನನ್ನೇ ಕೊಂದುಹಾಕಿದ್ದಾರೆ ಎಂದು ಹೇಳಿದರು.

ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜೆಡಿಎಸ್ ಜಿಲ್ಲಾ ನಾಯಕರಾದ ವಸಂತ ಪೂಜಾರಿಯವರು ಮಾತನಾಡುತ್ತಾ, ಸಂಘ ಪರಿವಾರದ ವಿರುದ್ಧ ಕರಾವಳಿ ಜಿಲ್ಲೆಯ ಸೌಹಾರ್ದಪ್ರಿಯ ಜನತೆ ಜಾಗೃತಿಗೊಳ್ಳಬೇಕಾಗಿದೆ ಎಂದು ಹೇಳಿದರು.
ಹೋರಾಟದ ನೇತೃತ್ವವನ್ನು ಜೆಡಿಎಸ್ ಜಿಲ್ಲಾ ಮುಖಂಡರಾದ, ರಾಮ್‍ಗಣೇಶ್, ಗಂಗಾಧರ್ ಉಳ್ಳಾಲ್, ಅಕ್ಷಿತ್ ಸುವರ್ಣ, ರತ್ನಾಕರ ಸುವರ್ಣ, ಸಿಪಿಐ ಜಿಲ್ಲಾ ನಾಯಕರಾದ ಎಚ್.ವಿ. ರಾವ್, ಕರುಣಾಕರ್, ಸೀತಾರಾಂ ಬೇರಿಂಜ, ಸುರೇಶ್ ಕುಮಾರ್, ಸಿಪಿಐ(ಎಂ) ಜಿಲ್ಲಾ ನಾಯಕರಾದ ಕೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಸುನಿಲ್‍ಕುಮಾರ್ ಬಜಾಲ್, ಕೃಷ್ಣಪ್ಪ ಸಾಲ್ಯಾನ್ ಮುಂತಾದವರು ವಹಿಸಿದ್ದರು.


Spread the love