ಪ್ರಾದೇಶಿಕ ಭಾಷೆಗಳು ಹಾಸ್ಯದ ಸರಕಾಗಬಾರದು

Spread the love

ಪ್ರಾದೇಶಿಕ ಭಾಷೆಗಳು ಹಾಸ್ಯದ ಸರಕಾಗಬಾರದು

“ಕುಂದಾಪ್ರದ್ದೇ ಮಾತ್ಕತಿ” ಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ್ ಶೆಟ್ಟಿ ಅಭಿಮತ

ಉತ್ಸವಗಳನ್ನು ಮಾಡುವುದರಿಂದ ಕುಂದಾಪ್ರ ಕನ್ನಡ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ

ಕುಂದಾಪುರ: ಪ್ರಾದೇಶಿಕ ಭಾಷೆಗಳು ಒಂದು ಜನ ಜೀವನದ ಸಂಸ್ಕೃತಿ, ಆಚರಣೆ, ವಿಚಾರ, ನಡೆ-ನುಡಿಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಇರಬೇಕೇ ಹೊರತು ಹಾಸ್ಯದ ಸರಕಾಗಬಾರದು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಕನ್ನಡ ಪ್ರಾಧ್ಯಾಪಕ ಡಾ. ಜಯಪ್ರಕಾಶ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಅವರು ಭಾನುವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಏರ್ಪಡಿಸಿದ “ಕುಂದಾಪ್ರದ್ದೇ ಮಾತ್ಕತಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾವು ಕುಂದಾಪುರ ಭಾಷೆಯನ್ನು ತಾತ್ವಿಕ ಹಿನ್ನೆಲೆಯಲ್ಲಿ ಗ್ರಹಿಸಬೇಕೆ ಹೊರತು ಉತ್ಸವಗಳನ್ನ ಮಾಡುವುದರ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ದೇವನೂರು ಮಹಾದೇವ ಅವರು ಕುಸುಮಬಾಲೆ ಕೃತಿಯಲ್ಲಿ ಬಳಸಿದ ಭಾಷೆಯಂತೆ ಕುಂದಾಪ್ರ ಕನ್ನಡ ಭಾಷೆಯಲ್ಲಿಯೂ ಅಂತಹ ಮೌಲಿಕ ಕೃತಿಗಳು ರಚನೆಯಾಗಬೇಕು ಎಂದರು.

ಖ್ಯಾತ ವ್ಯಂಗ್ಯಚಿತ್ರಕಾರ ಮತ್ತು ಕುಂದಾಪ್ರ ಕನ್ನಡ ಭಾಷಾ ನಿಘಂಟು ಸಂಪಾದಕ ಪಂಜು ಗಂಗೊಳ್ಳಿ ಕುಂದಾಪ್ರ ಕನ್ನಡ ನಿಘಂಟು ರಚನೆಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಭಂಡಾರ್ ಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ಮಾತನಾಡಿ ಇಂದಿನ ಯುವ ಪೀಳಿಗೆಯಿಂದ ಕುಂದಾಪ್ರ ಭಾಷೆಯ ಸೊಗಡನ್ನು ಅರ್ಥೈಸಿಕೊಂಡು ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಆಗಬೇಕು ಎಂದರು.

ಆರಂಭದಲ್ಲಿ ಹಿರಿಯರಾದ ಜಪ್ತಿಯ ಚಿಕ್ಕು, ಐತು ಮತ್ತು ಚಂದು ಅವರು ಕುಂದಾಪ್ರ ಕನ್ನಡದ ಸೊಗಡಿನ ಕೋಲು ಹುಯ್ಯುವ ಹಾಡನ್ನು ಪ್ರಸ್ತುತಪಡಿಸಿದರು.

ಬಳಿಕ ನಡೆದ ಸಂವಾದದಲ್ಲಿ ಡಾ. ದಿನೇಶ್ ಹೆಗ್ಡೆ, ಸಚ್ಚಿದಾನಂದ, ತಿಮ್ಮಪ್ಪ ಗುಲ್ವಾಡಿ ಮುಂತಾದವರು ಭಾಗವಹಿಸಿದರು.

ಕುಂದಾಪುರ ಸಮುದಾಯದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಪ್ರಸ್ತಾಪಿಸಿ ಸ್ವಾಗತಿಸಿದರು. ಗಣೇಶ್ ಶೆಟ್ಟಿ ವಂದಿಸಿದರು. ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments