ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ಬಂಧನಕ್ಕೆ ತುರವೇ ಒತ್ತಾಯ
ಮಂಗಳೂರು : ಕಟೀಲು ಕ್ಷೇತ್ರ ಸೇರಿದಂತೆ ಆರಾಧನಾ ಹಾಗೂ ಪ್ರಾರ್ಥನಾ ಕ್ಷೇತ್ರಗಳ ಅವಹೇಳನ ಮಾಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು
ತುಳುನಾಡಿನ ಜನರು ಪ್ರೀತಿ, ಸೌಹಾರ್ದತೆ, ಸಹನೆ ಮಾನವೀಯತೆಗೆ ಹೆಸರಾದವರು. ಪರಶುರಾಮ ಸೃಷ್ಟಿ ಎನಿಸಿರುವ ತುಳುನಾಡಿನ ಸಂಸ್ಕøತಿಯೇ ವಿಶಿಷ್ಟವಾದುದು. ವೀರರು, ಉದಾತ್ತರು, ತ್ಯಾಗಿಗಳು ಅದೆಷ್ಟೋ ಮಂದಿ ಇಲ್ಲಿ ಆಗಿ ಹೋಗಿದ್ದಾರೆ. ಮೇಲು, ಕೀಳು, ಜಾತಿ, ಧರ್ಮ ಎನ್ನದೆ ಪರಸ್ಪರ ಎಲ್ಲರೂ ಇಲ್ಲಿನ ಬೇರೆ ಬೇರೆ ಧರ್ಮಗಳ ಆರಾಧನಾ ಕ್ಷೇತ್ರಗಳಲ್ಲಿ ಪೂಜೆ-ಪ್ರಾರ್ಥನೆ ಸಲ್ಲಿಸುತ್ತಾರೆ. ಇತ್ತೀಚೆಗೆ ತುಳುನಾಡಿನ ಜನತೆಯ ಧಾರ್ಮಿಕ ಭಾವನೆಗಳಿಗೆ ಹಾಗೂ ಆಸ್ತಿಕರ ಶ್ರದ್ಧಾ ಭಕ್ತಿಗೆ ಘಾಸಿ ಮಾಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗುವಂತಿದೆ.
ಜಾತಿ, ಧರ್ಮ, ದೈವ, ದೇವರುಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಹೆಚ್ಚಾಗುತ್ತಿದೆ. ಎಳೆಯ ಮಕ್ಕಳಲ್ಲೂ ಜಾತಿ, ಧರ್ಮದ ವಿಷ ಬೀಜ ಭಿತ್ತಲಾಗುತ್ತಿದೆ. ಇದೀಗ ಆಧುನಿಕ ತಂತ್ರಜ್ಞಾನವ ಜಾತೀಯತೆ, ಮತಾಂಧತೆಯನ್ನು ಬಲಿಷ್ಠಗೊಳಿಸುತ್ತಿರುವ ಇಂದಿನ ಅಪಾಯಕಾರಿ ಸನ್ನಿವೇಶವು ನಮ್ಮಲ್ಲಿ ಆತ್ಮಾವಲೋಕನವನ್ನು ಹುಟ್ಟಿಸಬೇಕಾಗಿದೆ. ಕೆಲವು ವಿಕೃತ ಮನಸ್ಸಿನ ಮಂದಿ ವೈವಿದ್ಯವನ್ನು ಒಪ್ಪಿಕೊಳ್ಳದ ಸ್ಥಿತಿಗೆ ಬಂದಾಗ ವೈರುಧ್ಯ ನಿರ್ಮಾಣವಾಗುತ್ತದೆ ಒಬ್ಬರನೊಬ್ಬರು ಸಂಶಯದಿಂದ ನೋಡುವ ಸ್ಥಿತಿ ಏರ್ಪಡುತ್ತಿದೆ.
ಆದುದರಿಂದ ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ, ಯಾವುದೇ ಜಾತಿ, ಧರ್ಮದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದ ನಿಯೋಗ ಒತ್ತಾಯಿಸಿತ್ತು.
ನಿಯೋಗದಲ್ಲಿ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹಮೀದ್ ಹಸನ್ ಮಾಡೂರು, ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಜೈನ್, ಕಾರ್ಮಿಕ ಘಟಕದ ಅಧ್ಯಕ್ಷರಾದ ಕೃಷ್ಣ ಗಟ್ಟಿ ಸೋಮೇಶ್ವರ, ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಡ್ಕರೆ, ಜಿಲ್ಲಾ ಕಾರ್ಯದರ್ಶಿ ರಕ್ಷಿತ್ ಬಂಗೇರ ಕುಡುಪು, ಕಾಯದರ್ಶಿ ಹರೀಶ್ ಶೆಟ್ಟಿ, ರಿಯಾಜ್ ಬೆಂಗ್ರೆ, ಶಕೂರು ಮಾಡೂರು ಮತ್ತಿತ್ತರರು ಉಪಸ್ಥಿತರಿದ್ದರು.