ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣ: ತನಿಖೆಗೆ ಎಸ್ಪಿ ನೇತೃತ್ವದಲ್ಲಿ 7 ತಂಡಗಳ ರಚನೆ: ಸಚಿವ ಮಧು ಬಂಗಾರಪ್ಪ

Spread the love

ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣ: ತನಿಖೆಗೆ ಎಸ್ಪಿ ನೇತೃತ್ವದಲ್ಲಿ 7 ತಂಡಗಳ ರಚನೆ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಫರಂಗಿಪೇಟೆಯಲ್ಲಿ ನಾಪತ್ತೆಯಾಗಿರುವ ಪಿಯು ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆ ವಿಚಾರ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಬುಧವಾರ ಪ್ರಸ್ತಾಪವಾಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಯು.ಟಿ.ಖಾದರ್, ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಫೆ.25ರಿಂದ ನಾಪತ್ತೆಯಾಗಿರುವ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ತನಿಖೆ ಏನಾಯಿತು? ಆತನ ಪತ್ತೆಗೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿದರು. ದಿಗಂತ್ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಸರಕಾರಕ್ಕೆ ಸೂಚಿಸಿದರು.

ಈ ವೇಳೆ ರಾಜ್ಯ ಗೃಹಸಚಿವರ ಅನುಪಸ್ಥಿತಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, 17 ವರ್ಷದ ದ್ವಿತೀಯ ಪಿಯು ವಿದ್ಯಾರ್ಥಿ ದಿಗಂತ್ ಫೆ.25ರಂದು ರಾತ್ರಿ 7:30ರ ಸುಮಾರಿಗೆ ದೇವಸ್ಥಾನಕ್ಕೆಂದು ಮನೆಯಿಂದ ಹೋದವ ಬಳಿಕ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಫೋನ್ ಮತ್ತು ಚಪ್ಪಲಿ ಮನೆಯಿಂದ 200 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಬಾಲಕನ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಏಳು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ದಿಗಂತ್ ಮೊಬೈಲ್ ಫೋನ್ ಟ್ರೇಸ್ ಮಾಡಲಾಗುತ್ತಿದೆ. ಸದ್ಯ ಯಾವುದೇ ಮಾಹಿತಿ ಸಿಕ್ಕಿಲ್ಲ. ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಶೀಘ್ರವಾಗಿ ಪತ್ತೆ ಹಚ್ಚಲಾಗುವುದು. ವಿದ್ಯಾರ್ಥಿಗಳ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.

ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಕೇಂದ್ರೀಕರಿಸಿ ತನಿಖೆ ನಡೆಸುವಂತೆ ಸ್ಪೀಕರ್ ಸೂಚಿಸಿದರು.

ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಬಾಲಕ ನಾಪತ್ತೆಯಾಗಿ 8-9 ದಿನಗಳಾಗಿವೆ. ಮನೆಯಿಂದ ಹೊರ ಹೋದ ಆತನ ನಾಪತ್ತೆ ಸಹಜವಾಗಿ ಹೆತ್ತವರ ಆತಂಕಕ್ಕೆ ಕಾರಣವಾಗಿದೆ. ರೈಲ್ವೆ ಹಳಿಯಲ್ಲಿ ಪತ್ತೆಯಾಗಿದ್ದ ಆತನ ಚಪ್ಪಲಿಯಲ್ಲಿ ರಕ್ತದ ಕಲೆ ಇತ್ತು ಎಂಬ ಸುದ್ದಿಯೂ ಇದೆ. ಆದ್ದರಿಂದ ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತನಿಖೆಗೆ ವಿಶೇಷ ಘಟಕ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ದಿಗಂತ್ ನಾಪತ್ತೆಯ ವೇಳೆ ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ಕಾರೊಂದು ತಿರುಗಾಡುತ್ತಿತ್ತು ಎಂಬ ಸುದ್ದಿಯೂ ಇದೆ ಎಂದು ಹೇಳಿದರು.

ಎಲ್ಲ ಸೂಕ್ಷ್ಮತೆ ಅರ್ಥ ಆಗುತ್ತದೆ. ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಸರಕಾರ ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.


Spread the love
Subscribe
Notify of

0 Comments
Inline Feedbacks
View all comments