ಫೆ.17: ಉಡುಪಿಯಿಂದ ಪ್ರಯಾಗರಾಜ್ ಗೆ ನೇರ ರೈಲಿನ ವ್ಯವಸ್ಥೆ
ಉಡುಪಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಕರಾವಳಿ ಹಾಗೂ ಮಲೆನಾಡಿನ ಭಾಗದ ಭಕ್ತರಿಗೆ ಅನುಕೂಲವಾಗುವಂತೆ ಕೊಂಕಣ ರೈಲ್ವೆಯು ವಿವಿಧ ಪ್ರಾದೇಶಿಕ ರೈಲ್ವೆಯ ಸಹಯೋಗದೊಂದಿಗೆ ಫೆ.17ರಂದು ಉಡುಪಿಯಿಂದ ನೇರವಾಗಿ ಪ್ರಯಾಗ್ರಾಜ್ಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.
ಮಹಾಕುಂಭ ಸ್ಪೆಷಲ್ ರೈಲು (ರೈಲು ನಂ.01192) ಫೆ.17ರ ಅಪರಾಹ್ನ 12:30ಕ್ಕೆ ಉಡುಪಿಯಿಂದ ಹೊರಟು ಕುಂದಾಪುರ, ಕಾರವಾರ, ಮಡಗಾಂವ್, ರತ್ನಗಿರಿ, ರೋಹಾ, ಕಲ್ಯಾಣ್, ನಾಸಿಕ್ ಮಾರ್ಗವಾಗಿ ತೆರಳಲಿದ್ದು, ಫೆ.19ರಂದು ಬೆಳಗ್ಗೆ 6:30ಕ್ಕೆ ಪ್ರಯಾಗ್ರಾಜ್ ಜಂಕ್ಷನ್ ತಲುಪಲಿದೆ. ಅಲ್ಲಿ ಜನರನ್ನು ಇಳಿಸಿ ಫತೇಪುರ, ಗೋವಿಂದಪುರಿ, ಇಟ್ವಾ ಮೂಲಕ ತುಂಡ್ಲಾ ಜಂಕ್ಷನ್ನಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿದೆ.
ಫೆ.20ರ ಬೆಳಗ್ಗೆ 9:30ಕ್ಕೆ ತುಂಡ್ಲಾ ಜಂಕ್ಷನ್ನಿಂದ ತನ್ನ ಮರುಪ್ರಯಾಣ ಪ್ರಾರಂಭಿಸುವ ಈ ರೈಲು (ರೈಲು ನಂ.01191) ಸಂಜೆ 6:25ಕ್ಕೆ ಪ್ರಯಾಗ್ರಾಜ್ ಜಂಕ್ಷನ್ ತಲುಪಲಿದ್ದು, ಅಲ್ಲಿಂದ ಮರು ಪ್ರಯಾಣಿಸುವ ಭಕ್ತರೊಂದಿಗೆ ಪ್ರಯಾಣ ಬೆಳೆಸಿ ಫೆ.22ರ ಸಂಜೆ 6:10ಕ್ಕೆ ಉಡುಪಿ ರೈಲು ನಿಲ್ದಾಣ ತಲುಪಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಈ ಇಲೆಕ್ಟ್ರಿಕ್ ಟ್ರೈನ್ 96 ಗಂಟೆಗಳ ಅವಧಿಯಲ್ಲಿ 3500ಕಿ.ಮೀ. ದೂರ ಸಂಚರಿಸಲಿದೆ. ಈ ರೈಲು ಒಟ್ಟು 21 ಐಸಿಎಫ್ ಕೋಚ್ಗಳನ್ನು ಹೊಂದಿರಲಿದೆ. ಮಹಾಕುಂಭ ಮೇಳಕ್ಕೆ ತೆರಳುವವರಿಗೆ ಹೋಗುವ ಹಾಗೂ ಬರುವ ಅವಕಾಶವನ್ನು ಕಲ್ಪಿಸಲಾಗಿದೆ. ಒಮ್ಮೆಗೆ ಎರಡೂ ಟಿಕೇಟ್ಗಳನ್ನು ಕಾದಿರಿಸುವ ಅವಕಾಶವೂ ಇದ್ದು, ನಾಳೆಯಿಂದ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿಯಿಂದ ಕಾರವಾರದವರೆಗೆ (ಹೋಗುವ, ಬರುವ ) ರೈಲಿನ ವೇಳಾ ಪಟ್ಟಿ ಹೀಗಿದೆ.
ಫೆ.17 ಸೋಮವಾರ ಪ್ರಯಾಗ್ರಾಜ್ಗೆ ತೆರಳುವ ಸಮಯ: ಉಡುಪಿ- ಅಪರಾಹ್ನ 12:30, ಬಾರಕೂರು-12:42, ಕುಂದಾಪುರ-12:56, ಮೂಕಾಂಬಿಕಾ ರೋಡ್ ಬೈಂದೂರು-1:30, ಭಟ್ಕಳ-1:50, ಮುರ್ಡೇಶ್ವರ – 2:04, ಕುಮಟಾ- 2:30, ಗೋರ್ಕಣ ರೋಡ್- 2:50, ಕಾರವಾರ- 3:48, ಮಡಗಾಂವ್ ಜಂಕ್ಷನ್- ಸಂಜೆ 5:40, ರೋಹಾ 18ರ ಮುಂಜಾನೆ 4:05, ಕಲ್ಯಾಣ್- 5:57, ಮಾಣಿಕಪುರ್ ಜಂಕ್ಷನ್- 19 ಮುಂಜಾನೆ 4:10, ಪ್ರಯಾಗ್ರಾಜ್ ಜಂಕ್ಷನ್- ಬೆಳಗ್ಗೆ 6:25ಕ್ಕೆ.
ಫೆ.20ರ ಗುರುವಾರ ಮರುಪ್ರಯಾಣದಲ್ಲಿ ಪ್ರಯಾಗ್ರಾಜ್ ಜಂಕ್ಷನ್- ಸಂಜೆ 6:25,, ಮಾಣಿಕಪುರ್ ಜಂಕ್ಷನ್- 10:43, ಕಲ್ಯಾಣ್-21ರ ರಾತ್ರಿ 10:47, ರೋಹಾ- ಫೆ.22ರ ಮುಂಜಾನೆ 1:00, ಮಡಗಾಂವ್ ಜಂಕ್ಷನ್- ಫೆ.22ರ ಶನಿವಾರ ಅಪರಾಹ್ನ 1:30, ಕಾರವಾರ- 2:40, ಗೋಕರ್ಣ ರೋಡ್- 3:02, ಕುಮಟಾ- 3:22, ಮುರ್ಡೇಶ್ವರ- 3:56, ಭಟ್ಕಳ- ಸಂಜೆ 4:12, ಮೂಡಾಂಬಿಕಾ ರೋಡ್ ಬೈಂದೂರು- 4:38, ಕುಂದಾಪುರ -5:10, ಬಾರಕೂರು- 5:28, ಉಡುಪಿ ರೈಲು ನಿಲ್ದಾಣ- ಸಂಜೆ 6:10ಕ್ಕೆ.