ಫೆ. 24 : ಮೂವರು ಸಾಧಕರಿಗೆ ಕೆಥೊಲಿಕ್ ಸಭಾ, ಕೆಸಿಸಿಐ ಪ್ರೇರಣಾ ಉದ್ಯಮ ಪ್ರಶಸ್ತಿ ಪ್ರದಾನ
ಉಡುಪಿ: ಉಡುಪಿ ಜಿಲ್ಲೆಯ ಕ್ರೈಸ್ತ ಉದ್ಯಮಿಗಳ ಸಹಮಿಲನ ಹಾಗೂ ಪ್ರೇರಣಾ ಪ್ರಶಸ್ತಿ ವಿತರಣಾ ಸಮಾರಂಭವನ್ನು, ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಏಂಡ್ ಇಂಡಸ್ಟ್ರೀ ಮತ್ತು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಜಂಟಿ ಆಶ್ರಯದಲ್ಲಿ ಫೆಬ್ರವರಿ 24 ರ ಸಂಜೆ 5 ಗಂಟೆಗೆ ಉಡುಪಿ ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ಜರುಗಲಿದೆ ಎಂದು ಜೆರಿ ವಿ ಡಾಯಸ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ|ಜೆರಾಲ್ಡ್ ಐಸಾಕ್ ಲೋಬೊ ಸಮಾವೇಶವನ್ನು ಉದ್ಘಾಟಿಸಲಿದ್ದು, ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಏಂಡ್ ಇಂಡಸ್ಟ್ರೀ ಇದರ ಅಧ್ಯಕ್ಷರಾದ ಡಾ| ಜೆರಿ ವಿನ್ಸೆಂಟ್ ಡಾಯಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಮ್ ಸಿಸಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಅನಿಲ್ ಲೋಬೊ, ದಿಕ್ಸೂಚಿ ಭಾಷಣ ಮಾಡಲಿದ್ದು, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಡುಪಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಇಪಿ ದುಕೊರಿಯಾ, ಮಂಗಳೂರು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಹೆಲೆನ್ ಲೋಬೊ, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಘಂಟನೆ ಇದರ ಅಧ್ಯಕ್ಷ ಐ ಆರ್ ಫೆರ್ನಾಂಡಿಸ್, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಇದರ ಅಧ್ಯಕ್ಷರಾದ ವಾಲ್ಟರ್ ಸಲ್ಡಾನಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಸಮಾಜ ಸೇವಕ ಹ್ಯುಮ್ಯಾನೆಟಿ ಸಂಸ್ಥೆಯ ಅಧ್ಯಕ್ಷರಾದ ರೋಶನ್ ಬೆಳ್ಮಣ್ ಇವರನ್ನು ಸನ್ಮಾನಿಸಲಾಗುವುದು. ಉದ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರಿಗೆ ಪ್ರೇರಣಾ ಪ್ರಶಸ್ತಿಗಳು ಪ್ರದಾನ ಮಾಡಲಾಗುವುದು.
ಪ್ರೇರಣಾ ಯುವ ಉದ್ಯಮಿಯಾಗಿ ಜೋಯೆಲ್ ವಿವಿಯನ್ ಮಥಾಯಸ್ ಕಾರ್ಕಳ, ಪ್ರೇರಣಾ ಮಹಿಳಾ ಉದ್ಯಮಿಯಾಗಿ ಶರ್ಮಿಳಾ ಬುತೆಲ್ಲೊ ಕುಂದಾಪುರ ಮತ್ತು ಪ್ರೇರಣಾ ಉದ್ಯಮಿಯಾಗಿ ಜೋನ್ ಆರ್ ಡಿಸಿಲ್ವಾ ಕಾರ್ಕಳ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ವೇದಿಕೆ ಕಾರ್ಯಕ್ರಮದ ನಂತರ ಅನಿಲ್ ಡೆಸಾ ಶಂಕರಪುರ ಮತ್ತು ಬಿಂದಾಸ್ ಪೆರ್ನಾಲ್ ಬಳಗದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯುವುದು. ಕಾರ್ಯಕ್ರಮದಲ್ಲಿ ಸುಮಾರು 500 ಕ್ರೈಸ್ತ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಅಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಮ್ಯಾಕ್ಷಿಮ್ ಡಿಸೋಜಾ, ಎಮ್ ಸಿಸಿ ಬ್ಯಾಂಕ್ ಇದರ ನಿರ್ದೇಶಕ ಎಲ್ ರೊಯ್ ಕಿರಣ್ ಕ್ರಾಸ್ತಾ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.