ಫೆ.29: ಲಿವಾ ಮಿಸ್ ದಿವಾ ಯೂನಿವರ್ಸ್ -2020 ಆ್ಯಡ್ಲಿನ್ ಕ್ಯಾಸ್ತಲಿನೊ ಅವರಿಗೆ ಹುಟ್ಟೂರ ಸನ್ಮಾನ

Spread the love

ಫೆ.29: ಲಿವಾ ಮಿಸ್ ದಿವಾ ಯೂನಿವರ್ಸ್ -2020 ಆ್ಯಡ್ಲಿನ್ ಕ್ಯಾಸ್ತಲಿನೊ ಅವರಿಗೆ ಹುಟ್ಟೂರ ಸನ್ಮಾನ

ಉಡುಪಿ: ಮುಂಬಯಿಯಲ್ಲಿ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡೀಗೇರಿಸಿಕೊಂಡು ವರ್ಷಾಂತ್ಯದಲ್ಲಿ ನಡೆಯುತ್ತಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಉದ್ಯಾವರ ಮೂಲದ ಮಿಸ್ ಅ್ಯಡ್ಲಿನ್ ಕ್ಯಾಸ್ತಲಿನೊ ಅವರಿಗೆ ಫೆಬ್ರವರಿ 29ರಂದು ಹುಟ್ಟೂರ ಅಭಿನಂದನಾ ಸಮಾರಂಭ ಆಯೋಜಿಸಿಲಾಗಿದೆ ಎಂದು ಐಸಿವೈಎಮ್ ಸುವರ್ಣ ಮಹೋತ್ಸವ ಸಮಿತಿ ಇದರ ಕಾರ್ಯಕ್ರಮಗಳ ಸಂಚಾಲಕರಾದ ಸ್ಟೀವನ್ ಕುಲಾಸೊ ತಿಳಿಸಿದರು.

ಅವರು ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಪ್ರಸಕ್ತ ಸಾಲಿನ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಪ್ರತಿಷ್ಠಿತ ಕಿರೀಟವನ್ನು ಮುಡಿಗೇರಿಸಿಕೊಂಡ ಬೆಡಗಿ ಮಿಸ್ ಅ್ಯಡ್ಲಿನ್ ಕ್ಯಾಸ್ತಲಿನೋ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಕೊರಂಗ್ರಪಾಡಿ ಪರಿಸರದವರಾಗಿದ್ದು ಇವರ ಈ ಸಾಧನೆಯಿಂದ ಇಡೀ ಜಿಲ್ಲೆಯ ಮಾತ್ರವಲ್ಲದೆ ರಾಜ್ಯವೇ ಹೆಮ್ಮೆ ಪಡುವಂತಾಗಿದೆ.

ಮುಂಬಯಿಯಲ್ಲಿ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ -2020 ಕಿರೀಟ ಮುಡಿಗೇರಿಸಿಕೊಂಡ ಆ್ಯಡ್ಲಿನ್ ಕ್ಯಾಸ್ತಲಿನೊ ವರ್ಷಾಂತ್ಯದಲ್ಲಿ ನಡೆಯುತ್ತಿರುವ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಅ್ಯಡ್ಲಿನ್ ಕ್ಯಾಸ್ತಲಿನೊ ಉದ್ಯಾವರ ಕೊರಂಗ್ರಪಾಡಿ ನಿವಾಸಿಯಾಗಿದ್ದು ಅಲ್ಫೋನ್ಸಸ್ ಕ್ಯಾಸ್ತಲಿನೊ ಮತ್ತು ಮೀರಾ ಕ್ಯಾಸ್ತಲಿನೊರವರ ಪುತ್ರಿಯಾಗಿರುತ್ತಾಳೆ. 1998ರಲ್ಲಿ ಜನಿಸಿದ ಆ್ಯಡ್ಲಿನ್ 15 ವಯಸ್ಸಿನಲ್ಲಿ ಮುಂಬಯಿಯಲ್ಲಿ ಶಿಕ್ಷಣವನ್ನು ಪಡೆದುಕೊಂಡಿರುತ್ತಾರೆ. ಕೃಷಿ ಕುಟುಂಬದ ಹಿನ್ನಲೆ ಹೊಂದಿದ ಅವರು ಅದೇ ಕ್ಷೇತ್ರದ ವಿಎಸ್ ಪಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಪ್ರತಿಭಾನ್ವಿತರಾಗಿದ್ದ ಆ್ಯಡ್ಲಿನ್, ನಟನೆ, ಕೊರಿಯೋಗ್ರಾಫಿ ಅವರ ಆಸಕ್ತಿಯ ಕ್ಷೇತ್ರಗಳು ಮುಂಬಯಿಯಲ್ಲಿ ಹಲವು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯಕ್ಕೆ ಒಳಪಟ್ಟ ಆ್ಯಡ್ಲಿನ್ ಕೆಸ್ತಲಿನೊರವರ ಸಾಧನೆಯನ್ನು ಗೌರವಿಸಿ ದೇವಾಲಯದ ವತಿಯಿಂದ ಫೆಬ್ರವರಿ 29 ರಂದು ಸಂಜೆ 5.30ಕ್ಕೆ ಹುಟ್ಟೂರಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಅಭಿನಂದನಾ ಸಮಾರಂಭಕ್ಕೆ ಮುಂಚಿತವಾಗಿ ಲಿವಾ ಮಿಸ್ ದಿವಾ ಯುನಿವರ್ಸ್ 2020 ವಿಜೇತೆ ಆ್ಯಡ್ಲಿನ್ ಕ್ಯಾಸ್ತಲಿನೊರವರನ್ನು ಸಂಜೆ 4.15 ಕ್ಕೆ ಕೊರಂಗ್ರಪಾಡಿ ದೇವಯ್ಯ ಹೆಗ್ಡೆ ಕಂಪೌಂಡ್ ಬಳಿಯಿಂದ ಅಂದರೆ ನಿವಾಸದಿಂದ ವಾಹನ ಮೆರವಣಿಗೆಯ ಮೂಲಕ ತೆರೆದ ವಾಹನದಲ್ಲಿ ಕೊರಂಗ್ರಪಾಡಿ ಗುಡ್ಡೆಂಗಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಉದ್ಯಾವರ ಜೈ ಹಿಂದ್ ಮಾರ್ಗವಾಗಿ ಉದ್ಯಾವರ ಪೇಟೆಯ ಮೂಲಕ ಮೇಲ್ಪೇಟೆ, ಗುಡ್ಡೆಂಗಡಿ ಮಾರ್ಗವಾಗಿ ಆಕರ್ಷಕ ಮೆರವಣಿಗೆಯ ಮೂಲಕ ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ವಠಾರಕ್ಕೆ ಕರೆತರಲಾಗುವುದು.

ಸಂತ ಫ್ರಾನ್ಸಿಸ್ ಕ್ಷೇವಿಯರ್ ದೇವಾಲಯದ ನೇತೃತ್ವದಲ್ಲಿ ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿ, ಕೆಥೊಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆ ಉದ್ಯಾವರ ಘಟಕದ ಸಹಕಾರದೊಂದಿಗೆ ಈ ಅಭಿನಂದನಾ ಸಮಾರಂಭ ಜರುಗಲಿದೆ.

ಸಂಜೆ 5.30 ಕ್ಕೆ ಅಭಿನಂದನಾ ಸಭಾ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಸಾರಥಿ ಆ್ಯಡ್ಲಿನ್ ಕೆಸ್ತಲಿನೋರವರನ್ನು ಹುಟ್ಟೂರಲ್ಲಿ ಅಭಿನಂದನಾ ಸಮಾರಂಭದ ಮೂಲಕ ಸನ್ಮಾನಿಸಲಾಗುವುದು. ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ, ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ಉದ್ಯಮಿಗಳಾದ ಅಬ್ದುಲ್ ಜಲೀಲ್ ಸಾಹೇಬ್, ಲಿಯೋ ಡಿಸೋಜಾ ದುಬೈ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಭಾಗವಹಿಸಿಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚರ್ಚಿನ ಪಾಲಾನ ಮಂಡಳಿಯ ಉಪಾಧ್ಯಕ್ಷರಾದ ಮೆಲ್ವಿನ್ ನೊರೋನ್ಹಾ, ಕೆಥೊಲಿಕ್ ಸಭಾ ಉದ್ಯಾವರ ಇದರ ಅಧ್ಯಕ್ಷರಾದ ಲಾರೆನ್ಸ್ ಡೆಸಾ, ಸ್ತ್ರೀ ಸಂಘಟನೆ ಅಧ್ಯಕ್ಷೆ ಲೀನಾ ಮೆಂಡೊನ್ಸಾ, ಸುವರ್ಣ ಸಮಿತಿ ಐಸಿವೈಎಮ್ ಇದರ ನಿರ್ದೇಶಕರಾದ ರೊನಾಲ್ಡ್ ಡಿಸೋಜಾ, ಸಲಹೆಗಾರರಾದ ರೋಯ್ಸ್ ಫೆರ್ನಾಂಡಿಸ್ ಮತ್ತು ಜೂಲಿಯಾ ಡಿಸೋಜಾ ಉಪಸ್ಥಿತರಿದ್ದರು.


Spread the love