ಫೇಸ್ ಬುಕ್ಕಿನಲ್ಲಿ ಸಚಿವ ಖಾದರ್ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದಾತನ ಬಂಧನ
ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಆರೋಪದ ಮೇಲೆ ಕದ್ರಿ ಪೋಲಿಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮೂಡಬಿದ್ರಿಯ ನಿವಾಸಿ ದಿವ್ಯಪ್ರಸಾದ್ (35) ಎಂದು ಗುರುತಿಸಲಾಗಿದೆ.
ಪೋಲಿಸ್ ಮಾಹಿತಿಗಳ ಪ್ರಕಾರ ಎರಡು ವಾರದಹಿಂದೆ ಹಲೋ ಮಿನಿಸ್ಟರ್ ಎಂಬ ಕಾರ್ಯಕ್ರಮವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಅದಕ್ಕೆ ದಿವ್ಯಪ್ರಸಾದ್ ಯು ಟಿ ಖಾದರ್ ಕುರಿತಂತೆ ಅವಹೇಳನಕಾರಿಯಾದ ಪೋಸ್ಟ್ ಒಂದನ್ನು ಹಾಕಿದ್ದು ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೋಲಿಸರು ದಿವ್ಯಪ್ರಸಾದನನ್ನು ಬೆಂಗಳೂರಿನಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಸಚಿವ ಯುಟಿಖಾದರ್ ಅವರು ಎರಡು ವಾರಗಳ ಹಿಂದೆ ನಾಡಿನ ಸುದ್ದಿವಾಹಿನಿಯೊಂದರ ಹಲೋ ಮಿನಿಸ್ಟರ್ ಕಾರ್ಯಕ್ರಮದ ಕುರಿತು ದಿವ್ಯಪ್ರಸಾದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ನನ್ನ ಹಿತೈಶಿಗಳಾದ ಅಶ್ರಫ್ ಮೋನು, ಬೋಳಿಯಾರ್ ತಾಲೂಕು ಪಂಚಾಯತ್ ಸದಸ್ಯ ಜಬ್ಬಾರ್, ಮತ್ತು ಸುಕುರ್ ಅದನ್ನು ಒದ್ದಿದ್ದು, ಇದರಿಂದ ಮನನೊಂದು ದೂರು ನೀಡಿದ್ದರು. ದೂರು ನೀಡಿದ್ದರ ಮಾಹಿತಿ ಕೂಡ ನನಗೆ ಇರಲಿಲ್ಲ. ಈ ಮೊದಲು ಕೂಡ ಇಂತಹ ವರ್ತನೆಗಳು ಕೆಲವರಿಂದ ನಡೆದಿದ್ದು, ನಾನು ಯಾವುದೇ ದೂರು ದಾಖಲಿಸಲಿಲ್ಲ. ಸಮಾಜದಲ್ಲಿ ಇಂತಹ ಕೆಲವು ವ್ಯಕ್ತಿಗಳು ಸದಾ ಕಾಲ ಇದ್ದು, ತಮ್ಮನ್ನು ತಾವೇ ಸಮಾಜದ ಮುಂದೆ ತೋರಿಸಿಕೊಳ್ಳಬೇಕೆಂಬ ಅಪೇಕ್ಷೆ ಹೊಂದಿರುತ್ತಾರೆ ಅಂತಹವರ ಬಗ್ಗೆ ನಾನು ಹೆಚ್ಚು ತಲೆ ಕೆಡಸಿಕೊಂಡಿಲ್ಲ ಅದೇ ರೀತಿ ದಿವ್ಯಪ್ರಸಾದ್ ವಿರುದ್ದ ನೀಡಿದ ದೂರಿನ ಕುರಿತು ನನಗೆ ಮಾಹಿತಿ ಇಲ್ಲದಿದ್ದರೂ ಪೋಲಿಸರ ತನಿಖೆ ನಡೆಸುತ್ತಿದ್ದಾರೆ ಎಂದರು.