ಫ್ರೀಜರ್ ಇಲ್ಲದೆ ಕೇವಲ 2 ಸಾವಿರ ಖರ್ಚಿನಲ್ಲಿ ಶವವವನ್ನು ಬಹುದಿನಗಳ ಕಾಲ ರಕ್ಷಿಸಬಹುದಂತೆ!
ಬೆಂಗಳೂರು: ವ್ಯಕ್ತಿ ಮೃತಪಟ್ಟರೆ ಸಂಬಂಧಿಕರು ಬರುವವರೆಗೂ ಶವ ಕೆಡದಂತೆ ಕಾಪಾಡುವುದು ದೊಡ್ಡ ಖರ್ಚಿನ ಕೆಲಸ. ಆದರೆ ಇಲ್ಲೊಬ್ಬರು ಕೇವಲ 2 ಸಾವಿರ ರೂಪಾಯಿಯಲ್ಲಿ ಶವ ಕೆಡದಂತೆ ಯಾವ ಫ್ರಿಜರ್ ನಲ್ಲೂ ಇಡದೇ ಕಾಪಾಡುವ ವಿಧಾನವನ್ನು ಕಂಡುಹಿಡಿದಿದ್ದರೆ.
ಡಾ.ದಿನೇಶ್ ಇವರು ಕಡಿಮೆ ಖರ್ಚಿನಲ್ಲಿ ಮೃತದೇಹವನ್ನು 10 ರಿಂದ 15 ವರ್ಷಗಳು ಕೆಡದಂತೆ ಹಾಗೂ ವಾಸನೆ ಬಾರದಂತೆ ಸಂರಕ್ಷಿಸಿಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಡಾ.ದಿನೇಶ್ ಈ ಸಂಶೋಧನೆಯನ್ನು ಹಾವಿನ ಮೇಲೆ ವಿಶೇಷ ರಾಸಾಯನಿಕವನ್ನು 10 ವರ್ಷದ ಹಿಂದೆಯೇ ಪ್ರಯೋಗಿಸಿದ್ದು, ಇಂದಿಗೂ ಹಾವು ಚೂರೂ ಸುಕ್ಕಾಗದೇ ಜೀವಂತವಿರುವಂತೆ ಭಾಸವಾಗುತ್ತಿದೆ.
ಈಗ ತನ್ನ ಸಂಶೋಧನೆಯ ಪ್ರಾತ್ಯಕ್ಷಿಕೆಯನ್ನು ನಾನಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಖಾಸಗಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ದಿನೇಶ್ ಅವರು ನಡೆಸಿಕೊಟ್ಟಿದ್ದಾರೆ. 10 ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಶವವನ್ನು ಮುಂದಿಟ್ಟುಕೊಂಡು ದಿನೇಶ್ ಅವರು ಈಗ ಸಂಶೋಧನೆಯನ್ನು ವಿವರಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೆ ದಾನ ಕೊಟ್ಟ ಶವಗಳನ್ನು ಕೆಮಿಕಲ್ಸ್ ನಲ್ಲಿ ಮುಳುಗಿಸಿಟ್ಟು ಕೆಡದಂತೆ ಕಾಪಾಡಲು ಹೆಚ್ಚಿನ ಹಣ ಖರ್ಚಾಗುತ್ತಿತ್ತು. ಆದರೆ ಡಾ. ದಿನೇಶ್ ಶವ ಸಂರಕ್ಷಣೆಗೆ ಕೇವಲ 2 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ಈ ಸಂಶೋಧನೆಯಿಂದ ವೈದ್ಯಕೀಯ ಕಾಲೇಜು ಮತ್ತು ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಸಂಶೋಧನಾ ವಿದ್ಯಾರ್ಥಿನಿ ಪವಿತ್ರ ಹೇಳಿದ್ದಾರೆ.