ಬಂಟಕಲ್ – ಹೇರೂರು ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತ ಮಕ್ಕಳು

Spread the love

ಬಂಟಕಲ್ – ಹೇರೂರು ಗದ್ದೆಯಲ್ಲಿ ನಾಟಿ ಮಾಡಿ ಕೃಷಿ ಪಾಠ ಕಲಿತ ಮಕ್ಕಳು

ಉಡುಪಿ: ಭಾರತ ಕೃಷಿ ಪ್ರಧಾನ ದೇಶ. ರೈತರು ದೇಶದ ಬೆನ್ನೆಲುಬು. ಆದರೆ ಇಂದು ಭತ್ತದ ಗದ್ದೆಗಳು ಮಾಯವಾಗಿದೆ. ಗದ್ದೆ ಬೇಸಾಯ ಮೂಲೆಗುಂಪಾಗುತ್ತಿದೆ . ಬೇಸಾಯದ ನೈಜ ಸಂತಸ ಹಾಗೂ ಆವಶ್ಯಕತೆಯ ಕುರಿತು ಯುವ ಪೀಳಿಗೆ ಜಾಗೃತರಾಗಬೇಕು. ಅಲ್ಲದೆ ಅನ್ನದಾತನ ನಿಜ ವೃತ್ತಾಂತ ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಯಬೇಕು. ಇದರಿಂದ ಗದ್ದೆ ಬೇಸಾಯದ ಬಗ್ಗೆ ವಿಶೇಷ ಜಾಗೃತಿ ವಿದ್ಯಾರ್ಥಿಗಳಿಗೆ ಲಭಿಸಲು ಸಹಕಾರಿಯಾಗುತ್ತದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಅವರು ಶನಿವಾರ ಬಂಟಕಲ್ ಸಮೀಪದ 92 ನೇ ಹೇರೂರು ಗ್ರಾಮದ ವಿಜಯ್ ಧೀರಜ್ ಅವರ ಭತ್ತದ ಗದ್ದೆಯಲ್ಲಿ ಶಿರ್ವ ಡೊನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಒಂದು ದಿನ ವಿಶಿಷ್ಟ ಕಾರ್ಯಕ್ರಮದಲ್ಲಿ ಗದ್ದೆಗಿಳಿದು ನೇಜಿ ನೆಡುವ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಲ್ಲದೆ ದೇಶದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದು ಹೇಳುವುದರ ಮೂಲಕ ಕೃಷಿಯ ಮಹತ್ವ ತಿಳಿಸಿದ್ದರು. ಇದೇ ರೀತಿ ಮುಂದೆಯೂ ವಿದ್ಯಾರ್ಥಿಗಳಲ್ಲಿ ಬೇಸಾಯದ ಆಸಕ್ತಿ ಮೂಡುವಂತೆ ಮಾಡುವುದು ಅನಿವಾರ್ಯ ಮತ್ತು ಅತ್ಯವಶ್ಯಕ ಎಂದರು.


ವಿಜಯ್ ಧೀರಜ್ ಅವರು ಭತ್ತ ನಾಟಿ ಮಾಡುವುದರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರಲ್ಲದೆ ಕೃಷಿಯನ್ನು ಜೀವಂತವಾಗಿರಿಸುವಂತೆ ಕರೆ ನೀಡಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸ್ವತಃ ಗದ್ದೆಗಿಳಿದು ನೇಜಿ ನೆಟ್ಟು ಕೃಷಿ ಕುರಿತು ಮಾಹಿತಿ ತಿಳಿದುಕೊಂಡರು. ಇನ್ನೂ ಇವರ ಜತೆ ಶಿಕ್ಷಕರು ಗದ್ದೆಗಿಳಿದು ನಾಟಿ ಮಾಡುವ ಮೂಲಕ ಮಕ್ಕಳಿಗೆ ಸಾಥ್ ನೀಡಿದರು.

ದಿನವಿಡೀ ಗದ್ದೆ ತೋಟಗಳಲ್ಲಿ ಕಳೆದ ಮಕ್ಕಳು ಹತ್ತಿರದ ನದಿಯಲ್ಲಿ ಆಟವಾಡಿ, ಅಪ್ಪಟ ದೇಸಿ ತಿಂಡಿಗಳನ್ನು ಮತ್ತು ಊಟವನ್ನು ಸವಿದರು. ವಿಶೇಷ ಆಕರ್ಷಣೆಯಾಗಿ ಕೋಣ, ಕೋಳಿಗಳ ಪ್ರದರ್ಶನ ಹಾಗೂ ಪಾಡ್ದಾನ ಹಾಡುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ, ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ವಂ|ಹೆನ್ರಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು.


Spread the love