ಬಂಟ್ವಾಳ: ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು; ವೃದ್ಧೆ ಮೃತ್ಯು
ಬಂಟ್ವಾಳ: ಮಗನ ಅಂಗಡಿ ಹೊರಗೆ ಕುಳಿತುಕೊಂಡಿದ್ದ ವೃದ್ದೆಯೋರ್ವರಿಗೆ ಕಾರೊಂದು ಢಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಾಲೆದಮರ ಎಂಬಲ್ಲಿ ಫೆ.23 ರಂದು ನಡೆದಿದೆ.
ವಾಮದಪದವು ನಿವಾಸಿ ಸುಮತಿ(91) ಮೃತಪಟ್ಟ ವೃದ್ದೆ. ಪುತ್ರ ಮಂಜುನಾಥ್ ಅವರ ದಿನಸಿ ಅಂಗಡಿಯ ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಫೆ.23ರಂದು ಸಾಯಂಕಾಲ ಸುಮಾರು 6.45 ರ ಹೊತ್ತಿಗೆ ಬಂಟ್ವಾಳ ಮಣಿಹಳ್ಳ ಕಡೆಯಿಂದ ವಾಮದಪದವು ಕಡೆಗೆ ಶೋಭಾ ಅವರು ಚಲಾಯಿಸಿಕೊಂಡ ಬಂದ ಕಾರು ನಿಯಂತ್ರಣ ತಪ್ಪಿ ಅಂಗಡಿಯ ಕಡೆಗೆ ನುಗ್ಗಿ ಸುಮತಿಯವರಿಗೆ ಢಿಕ್ಕಿಯಾಗಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಮಾರು ರಾತ್ರಿ 11.45ರ ವೇಳೆಗೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಕಾರು ವೇಗವಾಗಿ ಬಂದು ಅಂಗಡಿಯೊಳಗೆ ನುಗ್ಗಿದ ದೃಶ್ಯ ಹಾಗೂ ಅಂಗಡಿಯ ಹೊರಗಡೆ ಕುಳಿತುಕೊಂಡಿದ್ದ ವೃದ್ದೆಗೆ ಢಿಕ್ಕಿ ಹೊಡೆಯುವ ದೃಶ್ಯ ಕೂಡ ಇದರಲ್ಲಿ ಸೆರೆಯಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.