ಬಂಟ್ವಾಳದಲ್ಲಿ ಯುವಕನ ಕೊಲೆ ಪ್ರಕರಣ : ಗುಂಡ್ಯದಲ್ಲಿ ಗುಂಡು ಹಾರಿಸಿ ಆರೋಪಿಯ ಬಂಧನ
ಬಂಟ್ವಾಳ: ರೌಡಿ ಶೀಟರ್ ಉಮರ್ ಫಾರೂಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಶನಿವಾರ ಬೆಳಗ್ಗೆ ಗುಂಡ್ಯದಲ್ಲಿ ಪೊಲೀಸರು ಗುಂಡು ಹಾರಿಸಿ ಬಂಧಿಸಲಾಗಿದ್ದು, ಘಟನೆಯಿಂದ ಬಂಧಿತ ಆರೋಪಿ ಮತ್ತು ಎಸ್ಸೈ ಒಬ್ಬರು ಗಾಯಗೊಂಡಿದ್ದಾರೆ.
ಮೂಲತಃ ಕಲ್ಲಡ್ಕ ನಿವಾಸಿ ಪ್ರಸಕ್ತ ನಂದಾವರದಲ್ಲಿ ವಾಸವಿರುವ ಖಲೀಲ್ ಬಂಧಿತ ಆರೋಪಿ. ಕಾರ್ಯಾಚರಣೆ ವೇಳೆ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರು ಗಾಯಗೊಂಡಿದ್ದಾರೆ.
ಶುಕ್ರವಾರ ಸಂಜೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಕಲ್ಲಡ್ಕ ನಿವಾಸಿ ರೌಡಿ ಶೀಟರ್ ಉಮರ್ ಫಾರೂಕ್ ಎಂಬಾತನನ್ನು ತಂಡ ವೊಂದು ಕಡಿದು ಹತ್ಯೆ ನಡೆಸಿತ್ತು. ಹತ್ಯೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳು ಇಂದು ಬೆಳಗ್ಗೆ ಕಾರಿನಲ್ಲಿ ಬೆಂಗಳೂರಿಗೆ ಪರಾರಿಯಾಗು ತ್ತಿರುವ ಮಾಹಿತಿ ಪಡೆದ ಪೊಲೀಸರು ಗುಂಡ್ಯದಲ್ಲಿ ಕಾರನ್ನು ಅಡ್ಡಗಟ್ಟಿದ್ದಾರೆ. ಈ ಸಂದರ್ಭ ಪ್ರಮುಖ ಆರೋಪಿ ಖಲೀಲ್ ನನ್ನು ಪೊಲೀಸರು ಬಂಧಿಸಿದ್ದು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ಬೀಸಿದ್ದ ಇದರಿಂದ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಗಾಯಗೊಂಡಿದ್ದು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲವಾರು ದಾಳಿ ವೇಳೆ ಬಂಟ್ವಾಳ ನಗರ ಠಾಣೆ ಎಸ್ಸೈ ಅವಿನಾಶ್ ಆರೋಪಿ ಖಲೀಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಇದರಿಂದ ಖಲೀಲ್ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.