ಮಂಗಳೂರು: ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎನ್.ಶ್ರೀಧರ ಶೆಟ್ಟಿ ಅವರು ಹೇಳಿದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿದ ಬ್ರಿ.ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ ಶಿಸ್ತುಬದ್ಧ ಜೀವನ ಶೈಲಿಗೆ ಇಂತಹ ಉತ್ಸವಗಳು ಪ್ರೇರಣೆಯಾಗಲಿ ಎಂದರು.
ತೆನೆ ವಿತರಣೆ ಮಾಡಿ ಮಾತನಾಡಿದ ಮಂಗಳೂರು ವಿವಿಯ ನಿವೃತ್ತ ಪರೀಕ್ಷಾಂಗ ಕುಲಸಚಿವ ವಿ.ಚಿಕ್ಕಪ್ಪ ರೈ ಅವರು ಕಳೆದ 12 ವರ್ಷಗಳಿಂದ ವ್ಯವಸ್ಥಿತವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ಆಯೋಜಿಸುತ್ತಿರುವ ಸಂಘಟಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹರಿದಾಸ ಶರತ್ಶೆಟ್ಟಿ ಪಡು ಅವರು ಪ್ರಸ್ತುತ ಪಡಿಸಿದ `ಶೂರನಿಗೊಲಿದ ಶನೀಶ್ವರ’ ಕಥಾ ಕೀರ್ತನೆಯ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.
ನಚ್ಚ ಭಾರತಿ ಸಿ.ಶೆಟ್ಟಿ, ಪದ್ಮನಯನ ಎಸ್.ಶೆಟ್ಟಿ ಹಾಗು ಶಂಕರ ಸಿ. ರೈ ಅತಿಥಿಗಳಾಗಿದ್ದರು. ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಿ.ಎ.ಶಾಂತರಾಮ ಶೆಟ್ಟಿ ಪ್ರತಿಷ್ಠಾನದ ಟ್ರಸ್ಟಿ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಸಮಿತಿಯ ಕಾಯದರ್ಶಿ ದಿವಾಕರ ಸಾಮಾನಿ ಚೇಳಾರುಗುತ್ತು, ಮಾತೃಸಂಘದ ಕೋಶಾಧಿಕಾರಿ ಕೆ.ಮನಮೋಹನ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವನೆಗೈದು, ಸ್ವಾಗತಿಸಿದರು. ಸತೀಶ್ ಕೊಡಿಯಾಲ್ಬೈಲ್ ಹಾಗೂ ಶರತ್ ಶೆಟ್ಟಿ ಪಡು ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಜೊತೆಕಾರ್ಯದರ್ಶಿ ಮೀನಾ ಆರ್.ಶೆಟ್ಟಿ ವಂದಿಸಿದರು. ಮಾ.ವಿದ್ವತ್ ಶೆಟ್ಟಿ ಅವರಿಂದ ಪುಷ್ಪಾಂಜಲಿ ನೃತ್ಯ ಜರಗಿತು.