ಬಜಪೆ-ಕಳವಾರು ರಸ್ತೆ ಮುಚ್ಚದಿರಲು ಜಿ.ಪಂ.ಸದಸ್ಯರ ಒತ್ತಾಯ

Spread the love

ಬಜಪೆ-ಕಳವಾರು ರಸ್ತೆ ಮುಚ್ಚದಿರಲು ಜಿ.ಪಂ.ಸದಸ್ಯರ ಒತ್ತಾಯ
ಮಂಗಳೂರು: ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ(ಎಂಎಸ್‍ಇಝಡ್) ಬಜಪೆ-ಕಳವಾರು ರಸ್ತೆಯನ್ನು ಬಂದ್ ಮಾಡದಂತೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಒತ್ತಾಯಿಸಲಾಗಿದೆ.
ಸೋಮವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯೆ ವಸಂತಿ ಅವರು ಈ ವಿಷಯ ಪ್ರಸ್ತಾಪಿಸಿ, ಈಗಾಗಲೇ ಸದರಿ ರಸ್ತೆ ಮುಚ್ಚಿಸಲು ಎಸ್‍ಈಝಡ್ ನವರು ನೋಟೀಸು ಜಾರಿ ಮಾಡುತ್ತಿದ್ದಾರೆ. ಇದರಿಂದ ಈ ಭಾಗದ ನೂರಾರು ನಾಗರೀಕರಿಗೆ ತೀವ್ರ ತೊಂದರೆಯಾಗಲಿದ್ದು, ದೈನಂದಿನ ವ್ಯವಹಾರಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಲವಾರು ಕಿ.ಮೀ. ದೂರ ಸುತ್ತಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಯಾವುದೇ ಕಾರಣಕ್ಕೂ ರಸ್ತೆಯನ್ನು ಬಂದ್ ಮಾಡದೇ, ಈಗಿನಂತೇ ಸಂಚಾರಕ್ಕೆ ಮುಕ್ತವಾಗಿಡಲು ಆಗ್ರಹಿಸಿದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಬಜಪೆ-ಕಳವಾರು ರಸ್ತೆಯನ್ನು ಮುಚ್ಚದಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಗುವುದು ಎಂದು ತಿಳಿಸಿದರು.
ಸರಕಾರಿ ಕಾರ್ಯಕ್ರಮಗಳಿಗೆ ಆಯಾ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯರನ್ನು ಕಡ್ಡಾಯವಾಗಿ ಆಹ್ವಾನಿಸಬೇಕು. ಇದನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಏಪ್ರಿಲ್-ಮೇ ತಿಂಗಳಿನಲ್ಲಿಯೇ ಒಂದನೇ ತರಗತಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಬೇಕಾಗಿದೆ ಎಂದು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಮತ್ತಿತರರು ಇದ್ದರು.


Spread the love