ಬಜರಂಗದಳ ಮತ್ತು ವಿಎಚ್ ಪಿ ವತಿಯಿಂದ ಪುಸ್ತಕ, ವಿದ್ಯಾರ್ಥಿ ವೇತನ ವಿತರಣೆ

Spread the love

ಬಜರಂಗದಳ ಮತ್ತು ವಿಎಚ್ ಪಿ ವತಿಯಿಂದ ಪುಸ್ತಕ, ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು: ಒಂದು ಕಾಲದಲ್ಲಿ ಜ್ಞಾನಸಂಪನ್ನ ದೇಶವೆಂದು ಗುರುತಿಸಿಕೊಂಡಿದ್ದ ಭಾರತದ ಆತ್ಮ ಹಿಂದುತ್ವ ಆಗಿದೆ. ಆದರೆ ರಾಜಕಾರಣದಿಂದಲೇ ನಮ್ಮ ದೇಶದಲ್ಲಿ ಹಿಂದೂ ಸಂಸ್ಕೃತಿಗೆ ಅಪಮಾನ ಆಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ಪುರಭವನದಲ್ಲಿ ಸೋಮವಾರ ವಿಶ್ವಹಿಂದೂ ಪರಿಷತ್‌ ಮತ್ತು ಬಜರಂಗ ದಳದ ವತಿಯಿಂದ ಪುಸ್ತಕ, ವಿದ್ಯಾರ್ಥಿ ವೇತನ ಮತ್ತು ಅರ್ಹರಿಗೆ ಗಾಲಿ ಕುರ್ಚಿ ವಿತರಿಸುವ ಸಮಾರಂಭದ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಹಿಂದೆಲ್ಲ ಗಣಪತಿಯ ಕತೆ, ಮಹಾಭಾರತ, ರಾಮಾಯಣದ ಕತೆಗಳ ಮೂಲಕ ವಾಸ್ತವವಾಗಿ ಮಕ್ಕಳು ಜೀವನ ಮೌಲ್ಯವನ್ನು ಕಲಿಯುತ್ತಿದ್ದರು. ಆದರೆ ಕೋಮುವಾದದ ನೆಪದಲ್ಲಿ ಇಂತಹ ಕತೆಗಳನ್ನು ಮಕ್ಕಳಿಗೆ ಕಲಿಸುವುದೇ ಅಪರಾಧ ಎನ್ನಲಾಗುತ್ತಿದೆ ಎಂದರು.

ಪಬ್‌ದಾಳಿಯಂತಹ ಸಮಾಜದ ಪ್ರತಿಭಟನೆಗಳನ್ನು ಬಜರಂಗದಳಕ್ಕೆ ಆರೋಪಿಸಿ ಟೀಕಿಸುವುದು ಸಾಮಾನ್ಯವಾಗಿದೆ. ಆದರೆ ಬಜರಂಗ ದಳವಾಗಲೀ, ವಿಶ್ವ ಹಿಂದೂ ಪರಿಷತ್‌ ಆಗಲೀ ಸೇವೆ ಮತ್ತು ತ್ಯಾಗದ ದಾರಿಯಲ್ಲಿ ಸಾಗುತ್ತಿದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ವಿಶ್ವ ಹಿಂದೂ ಪರಿಷತ್‌ನ ಪ್ರಾಂತೀಯ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್‌ ಮಾತನಾಡಿ, ’ಸರ್ಕಾರದ ಅನುದಾನ ಪಡೆಯುವ ಅಥವಾ ಸರ್ಕಾರ ನಡೆಸುವ ಅಲ್ಪಸಂಖ್ಯಾತ ಶಾಲೆಗಳಲ್ಲಿ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಧರ್ಮದ ಕುರಿತ ಪಾಠಗಳಿದ್ದರೆ ಟೀಕೆಗಳು ಬರುವುದಿಲ್ಲ. ಆದರೆ ಗೀತೆ, ರಾಮಾಯಣ, ಮಹಾಭಾರತ ಕಲಿಕೆಯ ವಿಚಾರವೆತ್ತಿದ ಕೂಡಲೇ ಪ್ರತಿರೋಧ ವ್ಯಕ್ತವಾಗುತ್ತದೆ. ಸರ್ಕಾರದ ಅನುದಾನವನ್ನೇ ಪಡೆಯದ ಶಾಲೆಗಳಲ್ಲಿಯೂ ಗೀತೆಯ ಪಾಠ ಮಾಡಲು ಮುಂದಾದರೆ ಸರ್ಕಾರದ ನೋಟಿಸ್‌ಗಳು ಬರುತ್ತವೆ. ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಎಲ್ಲ ಧರ್ಮಗಳ ವಿಚಾರವನ್ನೂ ನಮ್ಮ ಮಕ್ಕಳು ಕಲಿಯಬೇಕು. ಅದೇ ರೀತಿ ನಮ್ಮ ಧರ್ಮದ ವಿಚಾರಗಳನ್ನು, ಜೀವನ ಮೌಲ್ಯದ ಕತೆಗಳನ್ನು ಅರಿಯಬೇಕು ಎಂದು ಹಿಂದುತ್ವ ಸಾರುತ್ತದೆ ಎಂದು ಅವರು ಹೇಳಿದರು.

ರಾಜಗೋಪಾಲ್‌ ರೈ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್‌, ವಿಎಚ್‌ಪಿ ಮುಖಂಡರಾದ ಶ್ರೀಧರ ಭಟ್‌, ಜಗದೀಶ್‌ ಶೇಣವ, ಶರಣ್‌ ಪಂಪ್‌ವೆಲ್‌, ಕೃಷ್ಣ ಮೂರ್ತಿ, ಗೋಪಾಲ ಕುತ್ತಾರ್‌, ಬಜರಂಗ ದಳದ ಭುಜಂಗ ಕುಲಾಲ್‌, ನವೀನ್‌ ಕೊಡಿಯಾಲ್‌ಬೈಲ್‌, ಜನಾರ್ದನ ಅರ್ಕುಳ, ಉದ್ಯಮಿಗಳಾದ ಪುಷ್ಪರಾಜ ಜೈನ್‌, ಅಶೋಕ್‌ ಅಡ್ಯಾರ್‌, ವಿಜಯ್‌ಕುಮಾರ್‌ ಇದ್ದರು.


Spread the love