ಬಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿರಾಳ ಚರ್ಚ್ ದಾಳಿ: ಕೊನೆಯ ಕೇಸ್ ಖುಲಾಸೆ

Spread the love

ಬಜರಂಗದಳ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿರಾಳ ಚರ್ಚ್ ದಾಳಿ: ಕೊನೆಯ ಕೇಸ್ ಖುಲಾಸೆ

ಮಂಗಳೂರು:  ಮಂಗಳೂರು ಚರ್ಚ್‍ಗಳಿಗೆ ನುಗ್ಗಿ ಏಸುಕ್ರಿಸ್ತ ಮೂರ್ತಿಯ ಎಡಗೈ ಮುರಿದು ದಾಂದಲೆ ನಡೆಸಿದ ಪ್ರಕರಣವನ್ನು ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿ ಕೊಂಡಿದ್ದ ಅಂದಿನ ಬಜರಂಗದಳ ಸಂಚಾಲಕ ಮಹೇಂದ್ರ ಕುಮಾರ್ ಮೇಲೆ ಇದ್ದ ಕೊನೆಯ ಕೇಸ್ ಮಂಗಳವಾರ ಖುಲಾಸೆ ಗೊಂಡಿದೆ.

ಸೆ.14ರಂದು ಬೆಳಗ್ಗೆ 15 ಮಂದಿ ಸೇರಿಕೊಂಡು ಮಿಲಾಗ್ರಿಸ್ ಬಳಿಯ ಎಡೋರೇಶನ್ ಮೊನೆಸ್ಟ್ರಿಯಲ್ಲಿ ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭ ಮರದ ದೊಣ್ಣೆಯಿಂದ ಕಿಟಕಿ ಗಾಜುಗಳನ್ನು ಪಡಿ ಮಾಡಿ, ಕ್ರೈಸ್ತ ದೇವರ ಸೇಕ್ರಮೆಂಟ್ ಮತ್ತು ಏಸು ದೇವರ ಮೂರ್ತಿಯ ಎಡಗೈಯನ್ನು ಮುರಿದು ಹಾಕಿದ್ದರು. ಮಂಗಳೂರು, ಬಂಟವಾಳ, ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ನಡೆದಿದ್ದವು.

ಈ ಎಲ್ಲ ಪ್ರಕರಣಗಳ ಕುರಿತು ಮಂಗಳೂರಿನ ವುಡ್‍ಲ್ಯಾಂಡ್ಸ್ ಹೋಟೆಲ್‍ನಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಹೇಂದ್ರ ಕುಮಾರ್ ಸಮರ್ಥಿಸಿ ಹೇಳಿಕೆ ನೀಡಿದ್ದರು ಈ ಕುರಿತು ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಜೆಎಂಎಫ್‍ಸಿ2ನೇ ನ್ಯಾಯಾಲಯದ ನ್ಯಾಯಾಧೀಶ ಮಹೇಶ್ ಬಿ.ಟ. ವಿಚಾರಣೆ ನಡೆಸಿ ಆರೋಪ ಮುಕ್ತ ಗೊಳಿಸಿ ತೀರ್ಪು ನೀಡಿದ್ದಾರೆ.

10 ವರ್ಷಗಳ ಕಾಲ ನಡೆದ ಪ್ರಕರಣದಲ್ಲಿ 12 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಪತ್ರಿಕೆಯವರೂ ಸಾಕ್ಷಿ ನುಡಿದಿದ್ದರು. ಈ ಪ್ರಕರಣದಲ್ಲಿ ಅಂದಿನ ಇನ್‍ಸ್ಪೆಕ್ಟರ್ ಎಚ್.ಎನ್.ವೆಂಕಟೇಶ್ ಪ್ರಸನ್ನ ಅವರು ಮಹೇಂದ್ರ ಕುಮಾರ್ ಅವರನ್ನು ಬಂಧಿಸಿದ್ದರು. ಮಹೇಂದ್ರ ಕುಮಾರ್ ಪರವಾಗಿ ಪಿ.ಪಿ. ಹೆಗ್ಡೆ ಅಸೋಸಿಯೇಶನ್ ನ ವಕೀಲ ರಾಜೇಶ್ ಕುಮಾರ್ ಅಮ್ಟಾಡಿ ವಾದಿಸಿದ್ದರು.

ಹಿಂದೂ ಮತ್ತು ಕ್ರೈಸ್ತರ ನಡುವಿನ ಸೌಹಾರ್ದ ಹಾಳು ಮಾಡುವ ಯಾವುದೇ ಉದ್ದೇಶ ಇಲ್ಲ, ಪತ್ರಿಕಾಗೋಷ್ಠಿಯಲ್ಲಿ ಮಹೇಂದ್ರ ಕುಮಾರ್ ಕೇವಲ ಮತಾಂತರ ವಿರುದ್ಧ ಮಾತನಾಡಿದ್ದರು. ಕ್ರೈಸ್ತ ಧರ್ಮ ಮೇಲೆ ಅಪಾರ ಗೌರವ ಇದ್ದು ಸಮಾಜ ಸೇವೆ ಮೇಲೆ ಅಭಿಮಾನ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ನುಡಿದಿದ್ದರು ಎಂದು ವಾದ ಮಂಡಿಸಿದ್ದರು.

ಚರ್ಚ್‍ಗಳಮೇಲೆ ದಾಳಿ ನಡೆಸಿದ ಪ್ರಕರಣಗಳು ವಿಚಾರಣೆಯಾಗಿ ಐದು ವರ್ಷಗಳ ಹಿಂದೆಯೇ ಆರೋಪಿಗಳು ಆರೋಪ ಮುಕ್ತರಾಗಿದ್ದರು.


Spread the love