ಬಜೆ ನೀರು ಶುದ್ಧೀಕರಣ ಘಟಕದ ಸುತ್ತ ಪಂಪಿಂಗ್ ನಿಷೇಧ

Spread the love

ಬಜೆ ನೀರು ಶುದ್ಧೀಕರಣ ಘಟಕದ ಸುತ್ತ ಪಂಪಿಂಗ್ ನಿಷೇಧ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಬಜೆಯಿಂದ ಉಡುಪಿಗೆ ಬರುವ ಕೊಳವೆ ಮಾರ್ಗದ ಗ್ರಾಮಗಳಿಗೆ ಮತ್ತು ಉಡುಪಿ ನಗರಸಭೆಯ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿರುವುದರಿಂದ ಬಜೆ ಅಣೆಕಟ್ಟಿನ ಸ್ವರ್ಣ ನದಿಯಲ್ಲಿ ನೀರಿನ ಹರಿವು 2017 ರ ಜನವರಿ ಮಾಹೆಯಲ್ಲಿಯೇ ಸಂಪೂರ್ಣ ನಿಂತು ಹೋಗಿರುತ್ತದೆ. ಹೀಗಾಗಿ ಸ್ವರ್ಣಾ ನದಿಯ ಪಾತ್ರದ ದೊಡ್ಡ ಹೊಂಡದಲ್ಲಿ ಲಭ್ಯವಿರುವ ನೀರನ್ನು ಡ್ರೆಡ್ಜಿಂಗ್ ಮೂಲಕ ಬಜೆ ಅಣೆಕಟ್ಟು ಬಳಿಯ ಶುದ್ಧೀಕರಣ ಘಟಕದ ಜಾಕ್‍ವೆಲ್ ಗೆ ಹಾಯಿಸಿ ಕುಡಿಯಲು ನೀರು ಸರಬರಾಜು ಮಾಡಬೇಕಾಗಿದೆ.

ಅದುದರಿಂದ ಉಡುಪಿ ನಗರಸಭೆಯು ಬೇಸಿಗೆಯಲ್ಲಿ ನೀರಿನ ಅಭಾವವನ್ನು ಸರಿದೂಗಿಸಲು ಸ್ವರ್ಣ ನದಿಯ ಪಾತ್ರದ ಹೊಂಡದಲ್ಲಿರುವ ನೀರನ್ನು ಡ್ರೆಡ್ಜಿಂಗ್ ಮೂಲಕ ಬಜೆ ನೀರು ಶುದ್ಧೀಕರಣ ಘಟಕದ ಜಾಕ್‍ವೆಲ್‍ಗೆ ಹರಿಸಿ ಪಂಪು ಮಾಡಲು ಉದ್ದೇಶಿಸಲಾಗಿದೆ.

ಆದುದರಿಂದ ಸರಕಾರದ ಕಾನೂನಿನಂತೆ ಸಾರ್ವಜನಿಕ ಕುಡಿಯುವ ನೀರಿನ ಮೂಲದಿಂದ 500 ಮೀ ಸುತ್ತಲಿನಲ್ಲಿ ಯಾವುದೇ ತೆರೆದ ಬಾವಿ /ಕೊಳವೆ ಬಾವಿ ಕೊರೆಯಲು ಅವಕಾಶವಿರುವುದಿಲ್ಲ ಹಾಗೂ ನದಿಗೆ ಪಂಪು ಅಳವಡಿಸಿ ನೀರು ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶಿಸಲಾಗಿದೆ.

ಯಾವುದೇ ರೀತಿಯ ಉಲ್ಲಂಘನೆಗಳಾದಲ್ಲಿ ಹಾಗೂ ನಗರಸಭೆಯ ಡ್ರೆಡ್ಜಿಂಗ್ ಮೂಲಕ ನೀರು ತೆಗೆಯುವಾಗ ಯಾವುದೇ ರೀತಿಯ ಅಡ್ಡಿ ಪಡಿಸುವವರನ್ನು ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love