ಬಳ್ಕೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಕೈದಿ ನಂಬರ್ 6106!
ದರ್ಶನ್ ಅಭಿಮಾನಿಗಳ ಅಭಿಮಾನಕ್ಕೆ ಪರ-ವಿರೋಧ ಚರ್ಚೆ. ಸೋಶಿಯಲ್ ಮೀಡಿಯಾದಲ್ಲಿ ನಡೆ ಸಮರ್ಥಿಸಿಕೊಂಡ ಚೋಣ್ ಗುಡ್ಡಿ ಫ್ರೆಂಡ್ಸ್.
ಕುಂದಾಪುರ: ತಾಲೂಕಿನ ಬಳ್ಕೂರು ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿ ವಿಸರ್ಜನೆ ವೇಳೆಯಲ್ಲಿ ಯುವಕರ ಗುಂಪೊಂದು ದರ್ಶನ್ ಕೈದಿ ನಂಬರ್ ಇರುವ ಟೀಶರ್ಟ್ ಧರಿಸಿ ಕುಣಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಳ್ಕೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಚೌತಿಯ ಮೂರನೇ ದಿನವಾದ ಸೋಮವಾರ ಗಣಪತಿ ಮೂರ್ತಿ ವಿಸರ್ಜನೆ ಅದ್ದೂರಿಯಾಗಿ ನಡೆದಿತ್ತು. ಮೂರ್ತಿ ವಿಸರ್ಜನೆ ವೇಳೆ ಬಳ್ಕೂರು ಚೋಣ್ ಗುಡ್ಡಿ ಫ್ರೆಂಡ್ಸ್ ನ ಸದಸ್ಯರು ದರ್ಶನ್ ಕೈದಿ ನಂಬರ್ 6106 ಬರಹವುಳ್ಳ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದರು. ಆರಂಭದಲ್ಲಿ ಕೆಲವರು ಕೈದಿ ನಂಬರ್ ಟೀ ಶರ್ಟ್ ಗೆ ವಿರೋಧ ವ್ಯಕ್ತಪಡಿಸಿದ ಕಾರಣ ಮಾತಿನ ಚಕಮಕಿ ಏರ್ಪಟ್ಟಿತು. ಕೂಡಲೇ ಎಚ್ಚೆತ್ತ ಕಂಡ್ಲೂರು ಠಾಣೆಯ ಪೊಲೀಸರು ಮುಂಜಾಗೃತಕ್ರಮವಾಗಿ ಯುವಕರು ಧರಿಸಿದ್ದ ಟೀ ಶರ್ಟ್ ಅನ್ನು ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ವೇಳೆ ಪೊಲೀಸರು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದ ನಡೆದು ಕೆಲವರು ಟೀ ಶರ್ಟ್ ತೆಗೆದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದರು ಎನ್ನಲಾಗಿದೆ.
ಸದ್ಯ ಅಲ್ಲೇ ಇತ್ಯರ್ಥವಾಗಿದ್ದ ಘಟನೆಯನ್ನು ದರ್ಶನ್ ಅಭಿಮಾನಿಗಳು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಆರೋಪಿಯಷ್ಟೆ…ಅಪರಾಧಿಯಲ್ಲ!:
ಘಟನೆ ನಡೆದು ನಾಲ್ಕೈದು ದಿನಗಳ ಬಳಿಕ ಚೋಣ್ ಗುಡ್ಡಿ ಫ್ರೆಂಡ್ಸ್ ಸದಸ್ಯರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಾಕಿದ್ದ ಫೋಟೊ ಹಾಗೂ ವಿಡಿಯೋ ದೃಶ್ಯಾವಳಿಗಳು ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳ ನಡೆಗೆ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಈ ನಡುವೆಯೂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಅಭಿಮಾನಿಗಳು “ಕೈದಿ ನಂಬರ್ 6106 ಆರೋಪಿಯಷ್ಟೆ ಅಪರಾಧಿಯಲ್ಲ ಎಂಬ ಶೀರ್ಷಿಕೆಯ ಮೂಲಕ ಭಾರತದ ಸಂವಿಧಾನದ 19ನೇ ವಿಧಿಯ ಪ್ರಕಾರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಲಾಗಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಕೈದಿ ನಂಬರ್ ಟೀ ಶರ್ಟ್ ವಿಚಾರದಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಕೆಲ ಯುವಕರು ದರ್ಶನ್ ಕೈದಿ ನಂಬರ್ ಟೀಶರ್ಟ್ ಧರಿಸಿ ಮೆರವಣಿಗೆಗೆ ಬಂದಿದ್ದು, ಸಮಿತಿಯವರೆಲ್ಲರೂ ಅವರಿಗೆ ತಿಳಿಹೇಳಿದ್ದೆವು. ಬಳಿಕ ಎಲ್ಲರೂ ಟೀ ಶರ್ಟ್ ತೆಗೆದು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಆದ ಗೊಂದಲಗಳು ಅಂದೇ ಬಗೆಹರಿಸಲಾಗಿತ್ತು. ಈಗ ಏಕೆ ಮುನ್ನೆಲೆಗೆ ಬಂತೋ ಗೊತ್ತಿಲ್ಲ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಧರ್ ಉಡುಪಿ ಹೇಳಿದ್ದಾರೆ.