ಬಹುಸಂಸ್ಕತಿಯನ್ನು ಒಪ್ಪದವರಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಷಡ್ಯಂತ್ರ: ಸಬೀಹಾ ಫಾತಿಮಾ
ಮಂಗಳೂರು: ನಮ್ಮ ದೇಶವು ವಿವಿಧ ಧರ್ಮ, ಭಾಷೆ, ಆಚಾರಗಳನ್ನು ಆಚರಿಸುತ್ತಾ ಒಂದೇ ಸಂವಿಧಾನದಡಿಯಲ್ಲಿ ಬುದುಕುತ್ತಿದ್ದೇವೆ. ಆದರೆ ದೇಶದ ಬಹುಸಂಸ್ಕತಿಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಸ್ವಯಂಘೋಷಿತ ದೇಶಪ್ರೇಮಿಗಳಿಂದ ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಷಡ್ಯಂತ್ರ ಮಾಡಲಾಗುತ್ತಿದೆ. ಆದ್ದರಿಂದ ಪ್ರಜ್ಞಾವಂತ ದೇಶದ ನಾಗರಿಕರು ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾದ ಅಗತ್ಯತೆ ಇದೆ ಎಂದು ಅನುಪಮ ಮಹಿಳಾ ಮಾಸಿಕ ಉಪಸಂಪಾದಕಿ, ಜಮಾಅತೆ ಇಸ್ಲಾಮೀ ಹಿಂದ್‍ನ ಸಬೀಹಾ ಫಾತಿಮಾ ಎಚ್ಚರಿಸಿದರು.
ಅವರು ಕೇಂದ್ರ ಸರಕಾರವು ತರಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಇಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಮಂಗಳೂರಿನ ಪುರಭವನದಲ್ಲಿ ಮುಸ್ಲಿಂ ಮಹಿಳೆಯರಿಗಾಗಿ ಆಯೋಜಿಸಿದ್ದ ಶರೀಅತ್ ಸಂರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಬ್ರಿಟೀಷರು ಭಾರತಕ್ಕೆ ಕಾಲಿಡುವುದಕ್ಕಿಂತ ಮುಂಚೆ ನಮ್ಮ ದೇಶವನ್ನಾಳಿದ್ದ ಹಲವಾರು ಮುಸ್ಲಿಂ ರಾಜರುಗಳ ಕೊಡುಗೆಯನ್ನು ಮರೆಮಾಚಲಾಗುತ್ತಿದೆ. ಈ ಮೂಲಕ ದೇಶದ ಇತಿಹಾಸವನ್ನು ತಿರುಚಿಸಲಾಗುತ್ತಿದೆ. ಬ್ರಿಟೀಷರು ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಈ ದೇಶವನ್ನು ಆಳಿದ್ದರು. ಅದನ್ನೇ ಇಂದು ನಮ್ಮ ದೇಶದಲ್ಲಿ ಮುಂದುವರಿಸಲು ಹವಣಿಸಲಾಗುತ್ತಿದೆ ಎಂದರು.
ಪರ್ಸನಲ್ ಲಾ ಎಂಬ ವಿಚಾರ ಕೇವಲ ಮುಸ್ಲಿಮರಿಗೆ ಮಾತ್ರ ಇಲ್ಲ. ಅದು ಹಿಂದೂ ಬಾಂಧವರಿಗೂ, ಕ್ರೈಸ್ತರಿಗೂ ಸೇರಿದಂತೆ ಇದೆ ಎಂಬುವುದು ಎಲ್ಲರೂ ತಿಳಿಯಬೇಕಾಗಿದೆ. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಎಲ್ಲರೂ ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ ಎಂದ ಅವರು, ಇಸ್ಲಾಮೀ ಶರೀಅತ್‍ನ ನಿಯಮಗಳು ಸರಿಯಾದ ರೀತಿಯಲ್ಲಿ ಅರಿತುಕೊಂಡು ಪ್ರತಿಯೊಂದು ಮುಸ್ಲಿಂ ಕುಟುಂಬ ಪಾಲಿಸಿದಲ್ಲಿ ಬದಲಾವಣೆ ಖಂಡಿತ ಸಾಧ್ಯವಿದೆ ಎಂದು ಸಬೀಹಾ ಫಾತಿಮಾ ಅಭಿಪ್ರಾಯಿಸಿದರು.
ತಲಾಖ್ ನಿಂದ ನಮ್ಮ ದೇಶದ ಮುಸ್ಲಿಂ ಮಹಿಳೆಯರು ಅನ್ಯಾಯಕ್ಕೊಳಗಾಗುತ್ತಿದ್ದಾರೆ ಎಂದು ಹೇಳುತ್ತಾ ಮುಸ್ಲಿಂ ಮಹಿಳೆಯರ ಬಗ್ಗೆ ವಿಪರೀತ ಕಾಳಜಿ ತೋರಿಸುವ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದಲ್ಲಿ ದಿನನಿತ್ಯ ಕೇಳಿಬರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಮದ್ಯಪಾನದಿಂದಾಗುತ್ತಿರುವ ಹಲವು ವಿದ್ಯಮಾನಗಳ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡದಿರುವುದು ವಿಪರ್ಯಾಸ ಎಂದು ಹೇಳಿದರು. . ಈ ಸಮಾವೇಶದ ಅಧ್ಯಕ್ಷತೆಯನ್ನು ಮುಸ್ಲಿಂ ಮಹಿಳಾ ಸಾಹಿತ್ಯ ಸಂಘದ ಉಪಾಧ್ಯಕ್ಷೆ ಝೊಹರಾ ಅಬ್ಬಾಸ್ ವಹಿಸಿದ್ದರು. ಎಸ್ ಕೆ ಎಸ್ ಎಂ ನ ಮಹಿಳಾ ಘಟಕದ ಮಮ್ತಾಝ್ ಬಿನ್ ಸಂಶುದ್ದೀನ್, , ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಶಾಹಿದಾ ಅಸ್ಲಂ, ಯುನಿವೆಫ್ ಮಹಿಳಾ ಘಟಕದ ಯು ಸುನೈನಾ ಆಸಿಫ್, ಎಚ್‍ಐಎಫ್ ಮಹಿಳಾ ಘಟಕದ ರೈಹಾನ ಬಿಂತಿ ಹಕೀಂ, ಸಿಸ್ಟರ್ಸ್ ಆಫ್ ಹೋಪ್‍ನ ಮರಿಯಂ ಶಫೀನಾ, ಹಿದಾಯ ಅರೆಬಿಕ್ ಇನ್ಸ್‍ಟಿಟ್ಯೂಟ್‍ನ ಶಹನಾಝ್ ಅಹ್ಮದ್, ಹಕ್ ಫೌಂಡೇಶನ್ ಮಹಿಳಾ ಘಟಕದ ಮಸೀರಾ ಅಬ್ದುಲ್ಲತೀಫ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ವಿವಿಧ ಮುಸ್ಲಿಮ್ ಸಂಘಟನೆಗಳ ಮಹಿಳಾ ವಿಭಾಗದ ನಾಯಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲುಬ್ನಾ ಝಕೀಯ್ಯಾ ಮತ್ತು ಮುರ್ಷಿದಾ ನಿರೂಪಿಸಿದರು. ಮಮ್ತಾಝ್ ಪಕ್ಕಲಡ್ಕ ಧನ್ಯವಾದವಿತ್ತರು. ಇದೇ ವೇಳೆ ಸಮಾವೇಶದ ಠರಾವನ್ನು ಮಂಡಿಸಲಾಯಿತು. ಸಮಾವೇಶದ ಬಳಿಕ ಸಾಂಕೇತಿಕವಾಗಿ ಪುರಭನದ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮರ್ಯಮ್ ಶಹೀರಾ ಮಾತನಾಡಿದರು.