ಬಾರ್ಕೂರಿನಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಉಡುಪಿ: ಬಾರ್ಕೂರಿನಲ್ಲಿ ನಡೆಯುತ್ತಿರುವ ಆಳುಪೋತ್ಸವದ ಪ್ರಯುಕ್ತ ಜಿಲ್ಲಾ ತೋಟಗಾರಿಕೆ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ಪ್ರಥಮ ದಿನವೇ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ|ಜಯಮಾಲಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ರೂಪೇಶ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಭುವನೇಶ್ವರಿ ಹಾಗೂ ಇತರರು ಉಪಸ್ಥಿತರಿದ್ದರು.
ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯ ವರೆಗೆ ಮೂರು ದಿನ ಫಲಪುಷ್ಪ ಪ್ರದರ್ಶನ ನಡೆಯಲಿದ್ದು ಮೊದಲ ದಿನವೇ ರಾತ್ರಿಯ ವರೆಗೆ ಸಾವಿರಾರು ಮಂದಿ ಈ ಪ್ರದರ್ಶನವನ್ನು ವೀಕ್ಷಿಸಿದ್ದು ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚು ಮಂದಿ ಪ್ರದರ್ಶಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಫಲಪುಷ್ಪ ಪ್ರದರ್ಶನದಲ್ಲಿ ಬಗೆ ಬಗೆಯ ಬಣ್ಣದ ಹೂಗಳು ಕೈ ಬೀಸಿ ಕರೆಯುತ್ತಿದ್ದು, ಗುಲಾಬಿ ಹಾಗೂ ಇತರ ಹೂವಿನಲ್ಲಿ ಅರಳಿದ ಶಿವಲಿಂಗ, , ಆನೆ, ಮೀನು, ಮಿಕ್ಕಿ ಮೌಸ್ ಹಾಗೂ ಇತರ ಆಕೃತಿಗಳು ಹೆಚ್ಚಿನ ರೀತಿಯಲ್ಲಿ ಗಮನ ಸೆಳೆದವು. ಇದಲ್ಲದೇ ದೊಡ್ಡ ಗಾತ್ರದ ಬಾಳೆಗೊನೆ, ದೊಡ್ಡ ತೆಂಗಿನಕಾಯಿ, ಪರಂಗಿಕಾಯಿ, ಬಣ್ಣ ಬಣ್ಣದ ತರಹೇವಾರಿ ದಪ್ಪ ಮೆಣಸಿನಕಾಯಿಗಳು ನೋಡುಗರಲ್ಲಿ ಬೆರುಗು ಮೂಡಿಸಿದವು.