ಬಿಜೆಪಿ ಅಮಾಯಕ ಯುವಕರನ್ನು ಪ್ರಚೊದನೆಯಿಂದ ದಾರಿ ತಪ್ಪಿಸಿ ಜೈಲಿಗೆ ಕಳುಹಿಸುತ್ತಿದೆ : ಪ್ರಮೋದ್ ಮಧ್ವರಾಜ್
ಉಡುಪಿ: ಭಾರತೀಯ ಜನತಾ ಪಕ್ಷ ಹಿಂದೂ ಸಂಘಟನೆಗಳ ಸಹಾಯದಿಂದ ಅಮಾಯಕ ಯುವಕರನ್ನು ದಾರಿ ತಪ್ಪಿಸಿ ಅವರನ್ನು ಪ್ರಚೋದಿಸುವ ಮೂಲಕ ಜೈಲಿಗೆ ಕಳುಹಿಸುವುದರೊಂದಿಗೆ ಅವರ ಭವಿಷ್ಯಕ್ಕೆ ಕೊಡಲಿಯೇಟು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಜರುಗಿದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ರಾಷ್ಟ್ರದಲ್ಲಿ ಅಭಿವೃದ್ದಿಯನ್ನು ಮಾಡುತ್ತಾ ಬಂದಿದ್ದು, ಅದೇ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಆಕರ್ಷಿಸುವ ಕೆಲಸ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ತಳಮಟ್ಟದಿಂದ ಯುವಕರನ್ನು ಒಗ್ಗೂಡಿಸಿ ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯ ಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಮುಂದಿನ ದಿನಗಳಲ್ಲಿ ರಾಷ್ಟ್ರದಾದ್ಯಂತ ಯುವ ಶಕ್ತಿಯನ್ನು ಒಗ್ಗೂಡಿಸುವ ಕಾರ್ಯ ನಡೆಯಬೇಕಾಗಿದೆ. ಭಾರತದಲ್ಲಿ 65% ಯುವಜನತೆಯನ್ನು ಹೊಂದಿದ್ದು ಅವರುಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕೆಲಸ ಆಗಬೇಕಾಗಿದೆ. ಭಾರತ ಎಂದು ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಯುವಕರು ತಮ್ಮ ಗ್ರಾಮದ ಸಮಸ್ಯೆಗಳನ್ನು ಅರಿಯುವದರೊಂದಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ ಎ ಗಫೂರ್ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ 30000 ಸದಸ್ಯತ್ವ ನೋಂದಾವಣೆ ಮಾಡಿದ್ದು, ಮೇ 15ರ ಒಳಗೆ 1 ಲಕ್ಷದ ಗುರಿ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ, ಅಮೃತ್ ಶೆಣೈ, ಚಂದ್ರಿಕಾ ಶೆಟ್ಟಿ, ಯತೀಶ್ ಕರ್ಕೆರಾ ಹಾಗೂ ಇತರರು ಉಪಸ್ಥಿತರಿದ್ದರು.