ಬಿಜೆಪಿ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಶೋಭಾ ಅಭಿಯಾನ!
ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮುಂಬರುವ ಲೋಕಸಭಾ ಚುನಾವಣೆಗೆ ಮತ್ತೆ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಂಭವವಿದ್ದು ಈ ನಿಟ್ಟಿನಲ್ಲಿ ಶೋಭಾ ವಿರುದ್ದ ಕಾರ್ಯಕರ್ತರಿಂದ ಗೋ ಬ್ಯಾಕ್ ಶೋಭಾ ಟ್ವೀಟ್ಟರ್ ಅಭಿಯಾನ ಆರಂಭವಾಗಿದೆ.
ಕಳೆದ ಐದು ವರ್ಷಗಳಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕರ್ತರ ಹಾಗೂ ಮತದಾರರಿಗೆ ಯಾವುದೇ ರೀತಿಯಲ್ಲಿ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿಲ್ಲ. ಕನಿಷ್ಠ ಕ್ಷೇತ್ರಕ್ಕೆ ಬರುವ ಸೌಜನ್ಯ ತೋರಿಸಿಲ್ಲ. ಐದು ವರ್ಷಗಳ ಕಾಲ ನಾವು ಸಂಸದರು ಇದ್ದೂ ಕೂಡ ಇಲ್ಲದಂತೆ ಆಗಿದೆ ಎಂದು ಕಾರ್ಯಕರ್ತರು ಟ್ವೀಟ್ಟರಿನಲ್ಲಿ ಆರೋಪಿಸಿದ್ದಾರೆ.
ಶೋಭಾ ಗೋ ಬ್ಯಾಕ್ ಹ್ಯಾಶ್ ಟ್ಯಾಗ್ ಮೂಲಕ ಟ್ವೀಟ್ ಆರಂಭಿಸಿ ಎರಡು ಗಂಟೆಯ ಅವಧಿಯಲ್ಲಿ ಒಂದುವರೆ ಸಾವಿರಕ್ಕಿಂತ ಹೆಚ್ಚು ಟ್ವೀಟ್ ಗಳಾಗಿವೆ. ಕಳೆದ ಬಾರಿ ಮೋದಿ ಅಲೆಯಲ್ಲಿ ಮತ ಚಲಾಯಿಸಿದೆವು ಈ ಬಾರಿ ಸ್ಥಳೀಯ ಬಿಜೆಪಿ ಅಭ್ಯರ್ಥಿಗಳೇ ಸಂಸದರಾಗಬೇಕು. ಶೋಭಾ ಕರಂದ್ಲಾಜೆ ಅವರು ಕ್ಷೇತ್ರದ ಕಡೆಗೆ ಬಂದಿಲ್ಲ ಮತದಾರರ ಸಂಕಷ್ಟ ಕೇಳಿಲ್ಲ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಸಿಲ್ಲ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರು ಟ್ವೀಟ್ಟರ್ ಟ್ರೆಂಡ್ ಅಭಿಯಾನ ಆರಂಭಿಸಿದ್ದರು.
ಈ ನಡುವೆ ಬಿಜೆಪಿ ಪಕ್ಷದ ಕಾರ್ಯಕರ್ತರಾಗಿದ್ದು ಶೋಭಾ ಅವರನ್ನು ಫೇಸ್ ಬುಕ್ ನಲ್ಲಿ ಸಂಸದರ ಸಾಧನೆ ಪ್ರಶ್ಸಿಸಿದ್ದಕ್ಕೆ ಪ್ರವೀಣ್ ಯಕ್ಷಿ ಮಠ ಅವರ ಮೇಲೆ ಸೆನ್ ಪೋಲಿಸ್ ಠಾಣೆಯಲ್ಲಿ ಶೋಭಾ ಬೆಂಬಲಿಗರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ಕೆಲವೇ ಸಮಯದಲ್ಲಿ ಹಲವಾರು ಯುವ ಕಾರ್ಯಕರ್ತರು ಫೇಸ್ ಬುಕ್, ವಾಟ್ಸಾಪ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಶೋಭಾ, ತಿಂಗಳೆ, ಹಾಗೂ ಇತರ ಬಿಜೆಪಿ ನಾಯಕರ ವಿರುದ್ದ ಕಮೆಂಟ್ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದರು.
ಕಾರ್ಯಕರ್ತರ ಪ್ರತಿಭಟನೆಗೆ ಬೆದರಿದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮತ್ತು ಬಿಜೆಪಿ ನಾಯಕರು ದೂರನ್ನು ವಾಪಾಸು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಶೋಭಾ ಅವರ ವಿರುದ್ದ ಸ್ವಪಕ್ಷೀಯರೇ ತಿರುಗಿ ಬಿದ್ದಿದ್ದು ಇತ್ತೀಚೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣೆ ಕುರಿತು ತಯಾರಿ ಸಭೆಯಲ್ಲಿ ಕೂಡ ಕಾರ್ಯಕರ್ತರು ಗೋ ಬ್ಯಾಕ್ ಶೋಭಾ ಘೋಷಣೆಗಳನ್ನು ಕೂಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಶೋಭಾ ಹಠಾವೋ ಪೇಜ್ ಗಳು ಕೂಡ ರಚಿಸಲಾಗಿದ್ದು ಒಟ್ಟಾರೆಯಾಗಿ ಶೋಭಾ ಕರಂದ್ಲಾಜೆ ಅವರನ್ನು ಮತ್ತೊಮ್ಮೆ ಉಡುಪಿ –ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿಸುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ಪಕ್ಷದ ನಾಯಕರು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎನ್ನುವುದು ಕಾದು ನೋಡಬೇಕಾಗಿದೆ.