ಬಿಜೆಪಿಗರಿಗೆ ದಮ್ಮು-ತಾಕತ್ತು ಇದ್ದರೆ ಅನಂತ ಕುಮಾರ್ ಹೆಗಡೆಯನ್ನು ಪಕ್ಷದಿಂದ ಉಚ್ಚಾಟಿಸಿ –ರಮೇಶ್ ಕಾಂಚನ್
ಉಡುಪಿ: ಬಿಜೆಪಿ ಪಕ್ಷದ ಸಂಸದ ಅನಂತ ಕುಮಾರ್ ಹೆಗಡೆ ಯವರು ಪದೇ ಪದೇ ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡುತಿದ್ದು ಅವರ ವಿರುದ್ದ ಬಿಜೆಪಿ ನಾಯಕರಿಗೆ ನಿಜವಾದ ದಮ್ಮು-ತಾಕತ್ತು ಇದ್ದರೆ ಪಕ್ಷದಿಂದ ಉಚ್ಚಾಟನೆ ಮಾಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಸವಾಲೆಸಿದಿದ್ದಾರೆ.
ಎಲ್ಲಾ ಸಮುದಾಯದ ಜನರ ಮತವನ್ನು ಪಡೆದು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ ಅನಂತ ಕುಮಾರ್ ಹೆಗಡೆ ತನ್ನ ಕೀಳು ಸಂಸ್ಕೃತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುವುದಾಗಿ ದರ್ಪದ ಮಾತು ನಿಜಕ್ಕೂ ಖಂಡನೀಯ. ಪದೇ ಪದೇ ಒಬ್ಬ ಸಂಸದರಾಗಿ ಇಂತಹ ಹೇಳಿಕೆ ನೀಡುವುದು ಸಮಾಜದಲ್ಲಿ ಅಶಾಂತಿ ಮೂಡಿಸಲು ಕಾರಣವಾಗುತ್ತದೆ.
ಅನಂತಕುಮಾರ್ ಹೆಗಡೆ ಅವರ ಹೇಳಿಕೆಯಿಂದ ದೂರ ಇರುವುದಾಗಿ ಹೇಳಿಕೊಂಡು ಬಿಜೆಪಿ ನಾಯಕರು ಕೈತೊಳೆದುಕೊಂಡರೆ ಸಾಲುವುದಿಲ್ಲ ಬದಲಾಗಿ ಅವರನ್ನು ಪಕ್ಷದಿಂದ ಹೊರಹಾಕುವ ಕೆಲಸ ಮಾಡಲಿ.
ಬಾಯಿ ಮಾತಿಗೆ ಅಂತರ ಕಾಯ್ದುಕೊಂಡಿದ್ದೇವೆ ಎನ್ನುವ ಮೂಲಕ ಮತ್ತಷ್ಟು ಮಾತನಾಡಲು ಬಿಜೆಪಿ ಪಕ್ಷ ಅವರಿಗೆ ಅವಕಾಶ ಮಾಡಿಕೊಟ್ಟು ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿದೆ ಎನ್ನುವ ಅನುಮಾನ ಕಾಡುತ್ತದೆ.
ಸಂಸದ ಅನಂತ ಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕವಾಗಿದ್ದು ಇವರಿಗೆ ನೆಲದ ಕಾನೂನಿನ ಬಗ್ಗೆ ಅವರಿಗಿರುವ ತಿರಸ್ಕಾರವನ್ನು ತೋರಿಸುತ್ತದೆ. ಈ ಹೇಳಿಕೆಯನ್ನು ಹೆಗಡೆ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೀಡಿದ್ದಲ್ಲ. ಸಾರ್ವಜನಿಕ ಸಮಾರಂಭದಲ್ಲಿ ಸಂಸದನಾಗಿ ಮಾತನಾಡಿರುವುದು. ಈ ವ್ಯತ್ಯಾಸ ತಿಳಿಯದಷ್ಟು ಬಿಜೆಪಿ ನಾಯಕರು ಮೂರ್ಖರಲ್ಲ. ಇವರಿಗೆ ಅನಂತಕುಮಾರ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು ತಾಕತ್ ಇಲ್ಲ ಅಷ್ಟೆ .
ಸಂಸದನಾಗಿ ತಮ್ಮ ಸ್ವಂತ ಕ್ಷೇತ್ರಕ್ಕೆ ನಯಾಪೈಸೆಯಷ್ಟು ಕೆಲಸವನ್ನು ಮಾಡದ ಮತ್ತು ಲೋಕಸಭೆಯಲ್ಲಿ ಬಾಯಿ ಮುಚ್ಚಿಕೊಂಡೇ ಐದು ವರ್ಷಗಳನ್ನು ಪೂರ್ಣಗೊಳಿಸಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡದಾದ್ಯಂತ ಜನರಲ್ಲಿ ಆಕ್ರೋಶವಿದೆ. ಇದಕ್ಕಾಗಿ ಹಿಂದುತ್ವ ಅಪಾಯದಲ್ಲಿದೆ ಎಂಬ ಹುಸಿಭೀತಿಯನ್ನು ಜನರಲ್ಲಿ ಹುಟ್ಟಿಸಿ ಕೋಮುಭಾವನೆಯನ್ನು ಕೆರಳಿಸಿ ಮತಗಳ ಧ್ರುವೀಕರಣಗೊಳಿಸುವುದು ಅವರ ಉದ್ದೇಶವಾಗಿದೆ. ಇದೇ ರೀತಿಯ ವರ್ತನೆ ಮುಂದುವರೆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಗಡೆಯವರಿಗೆ ಟಿಕೇಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಒಂದುವೇಳೆ ಟಿಕೇಟ್ ಸಿಕ್ಕಿದರೂ ಕೂಡ ಕ್ಷೇತ್ರದ ಜನ ನಿಷ್ಪ್ರಯೋಜಕ ಸಂಸದ ಅನಂತ ಕುಮಾರ್ ಹೆಗಡೆಯವರನ್ನು ಮನೆಗೆ ಕಳುಹಿಸುವ ಕೆಲಸ ಮಾಡಿಯೇ ಮಾಡುತ್ತಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.